Saturday, December 14, 2024
Homeಮಲೆನಾಡು ಕರ್ನಾಟಕಶಿವಮೊಗ್ಗವರಿಷ್ಠರು ಬಯಸಿದರೆ ಸಚಿವ ಸ್ಥಾನ ತೊರೆಯುವೆ: ಈಶ್ವರಪ್ಪ

ವರಿಷ್ಠರು ಬಯಸಿದರೆ ಸಚಿವ ಸ್ಥಾನ ತೊರೆಯುವೆ: ಈಶ್ವರಪ್ಪ

ಶಿವಮೊಗ್ಗ: ವರಿಷ್ಠರು ಬಯಸಿದರೆ ಸಚಿವ ಸ್ಥಾನ ತೊರೆದು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳುವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಸಚಿವ ಸ್ಥಾನಕ್ಕಿಂತ ಪಕ್ಷ ಸಂಘಟನೆಯೇ ತಮಗೆ ಹೆಚ್ಚು ಪ್ರಿಯ. ಬಿಜೆಪಿ ಶಿಸ್ತಿನ ಪಕ್ಷ. ವರಿಷ್ಠರು ಹೇಳಿದ ಹಾಗೆ ಎಲ್ಲರೂ ನಡೆದುಕೊಳ್ಳುವೆವು. ಸಚಿವ ಸ್ಥಾನ ಬಿಟ್ಟು ಪಕ್ಷದ ಸಂಘಟನೆಗೆ ಸೂಚಿಸಿದರೆ ಹೋಗಲೇಬೇಕು ಪಕ್ಷ ಹೇಳಿದ ಯಾವುದೇ ಕೆಲಸಕ್ಕೂ ಸಿದ್ಧ ಎಂದರು.

ಬಿಜೆಪಿ ರಾಜ್ಯ ಘಟಕದ ಸ್ಥಾನ ಖಾಲಿ ಇಲ್ಲ. ನಳಿನ್ ಕುಮಾರ್ ಕಟೀಲ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಅಧ್ಯಕ್ಷರಾದ ಮೇಲೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಪಡೆದಿದೆ. ಹಾಗಾಗಿ, ಕಟೀಲ್ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ವಿಧಾನ ಪರಿಷತ್ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಸ್ಥಾನಗಳನ್ನು ಶೀಘ್ರ ಭರ್ತಿ ಮಡಬೇಕಿದೆ. ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.