Saturday, December 14, 2024
Homeಸುದ್ದಿವಿದೇಶಕೊನೆಗೂ ರಿಯಾದ್ ನಿಂದ ತಿರುವನಂತಪುರಕ್ಕೆ ತಲುಪಿದ ಮೂವರು ಅನಿವಾಸಿ ಭಾರತೀಯರು…

ಕೊನೆಗೂ ರಿಯಾದ್ ನಿಂದ ತಿರುವನಂತಪುರಕ್ಕೆ ತಲುಪಿದ ಮೂವರು ಅನಿವಾಸಿ ಭಾರತೀಯರು…

ರಿಯಾದ್: ಶಿವನ್‌ಕುಟ್ಟಿ ಶ್ರೀಧರನ್‌ ತಿರುವನಂತಪುರ, ಮೋಹನನ್‌ ಮಹೇಶ್‌ ರಾಮಕೃಷ್ಣನ್‌ ನೆಡುಂಪಾರ ಮತ್ತು ಸುಧಾಕರನ್‌ ಸುಶೀಲಾ ಸುಮೇಶ್‌ ಕೊಲ್ಲಂರವರು, ಸೌದಿ ಅರೇಬಿಯಾದಲ್ಲಿ ಕೇರಳ ಮೂಲದ ಅನಿವಾಸಿ ಭಾರತೀಯರಾಗಿದ್ದು, ಇವರನ್ನು ಅಂತಿಮವಾಗಿ ಭಾರತೀಯ ರಾಯಭಾರ ಕಚೇರಿಯ ಮುಖೇನ ಮತ್ತು ಉಡುಪಿ ಮೂಲದ ವಕೀಲ ಹಾಗೂ ರಿಯಾದ್ ನ ಸಮಾಜಸೇವಕರಾದ ಪಿ.ಎ.ಹಮೀದ್ ಪಡುಬಿದ್ರಿ ರವರ ಸಹಾಯ ಮತ್ತು ಶ್ರಮದಿಂದ ಭಾರತಕ್ಕೆ ಕಳುಹಿಸಿಕೊಡಲಾಯಿತು.

ಕೇರಳದ ತಿರುವನಂತಪುರದಿಂದ ಕೆಲವು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಆಗಮಿಸಿದ ಈ ಮೂವರು, ಸೌದಿಯ ರಿಯಾದ್‌ನಲ್ಲಿ ಟೈಲ್ಸ್ ಮತ್ತು ಮಾರ್ಬಲ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.ಇವರು ಸೌದಿ ಪ್ರಾಯೋಜಕರೋರ್ವರ ಕೆಳಗೆ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದರು.

ಈ ಮೂರ್ವರಲ್ಲಿ ಶಿವನ್‌ಕುಟ್ಟಿ ಮತ್ತು ಮೋಹನನ್ ಮಹೇಶ್ ರವರು, ತಮ್ಮ ಸೌದಿ ಪ್ರಾಯೋಜಕ (Sponsor/ಕಫೀಲ್) ರೊಂದಿಗೆ ಮೊದಮೊದಲು ಉತ್ತಮ ಸಂಬಂಧವನ್ನು ಹೊಂದಿದ್ದರು. ಆದಾಗ್ಯೂ, ಅವರ ಪ್ರಾಯೋಜಕರು ಕೋವಿಡ್ -19 ಸಮಯದಲ್ಲಿ ತಮ್ಮ ವಾರ್ಷಿಕ ಗುರುತುಕಾರ್ಡ್ (ಇಕಾಮಾ) ಗಳನ್ನು ನವೀಕರಿಸಲು ನಿರಾಕರಿಸಿದ್ದರು.

ಶಿವನ್‌ಕುಟ್ಟಿಯ ಮಾಹಿತಿ ಪ್ರಕಾರ, ಶಿವನ್ ಕುಟ್ಟಿ ಮತ್ತು ಮೋಹನನ್ ಮಹೇಶ್ ತಮ್ಮ ಇಕಾಮಾಗಳನ್ನು ನವೀಕರಿಸಲು ಪ್ರಾಯೋಜಕರಿಗೆ ಶುಲ್ಕದ ಮೊತ್ತವನ್ನೂ ಪಾವತಿಸಿದ್ದರು. ಆದರೆ, ಪ್ರಾಯೋಜಕ ಅವನ್ನು ನವೀಕರಿಸಲು ನಿರಾಕರಿಸಿದ್ದರು.

ಇದರ ಪರಿಣಾಮದಿಂದ ಅವರು ಒಂದು ವರ್ಷಕ್ಕೂ ಹೆಚ್ಚುಕಾಲ ಸೂಕ್ತ ಇಕಾಮಾಗಳಿಲ್ಲದೆ ನಿರುದ್ಯೋಗಿಗಳಾಗಿದ್ದರು.ಮಾತ್ರವಲ್ಲದೆ, ಅವರ ಪ್ರಾಯೋಜಕರು ಈ ಮೂರ್ವರ ವಿರುದ್ಧ ಸೌದಿ ಪಾಸ್‌ಪೋರ್ಟ್ ಇಲಾಖೆಯಲ್ಲಿ (ಜವಾಝಾತ್) ಪರಾರಿ ಪ್ರಕರಣವನ್ನು (ಹುರೂಬ್) ದಾಖಲಿಸಿದ್ದರು.

ಸುಮೇಶ್ ಕೊಲ್ಲಂ ಪ್ರಕರಣ ಈ ಈರ್ವರಿಗಿಂತ ಸ್ವಲ್ಪ ವಿಭಿನ್ನವಾಗಿದ್ದು, ಅವರ ಪ್ರಾಯೋಜಕರು, ತನ್ನ ಪ್ರಾಯೋಜಕತ್ವದಡಿಯಲ್ಲಿ ಯಾರನ್ನೂ ಇಟ್ಟುಕೊಳ್ಳಲು ಬಯಸದ ಕಾರಣ,ತಕ್ಷಣ
ಸೌದಿ ಅರೇಬಿಯಾವನ್ನು ತೊರೆಯುವಂತೆ ತಮ್ಮ ಉದ್ಯೋಗ ಒಪ್ಪಂದವು ಪೂರ್ಣಗೊಳ್ಳುವ ಮೊದಲೇ ಅವರಿಗೆ ತಿಳಿಸದೆಯೇ ಅಂತಿಮ ನಿರ್ಗಮನ ವೀಸಾ(Exit Visa) ವನ್ನು ಏರ್ಪಾಡುಮಾಡಿದ್ದರು.

ಇದರಿಂದ ತೀವ್ರ ತೆರನಾದ ಆರ್ಥಿಕ ಮತ್ತು ಕಾನೂನಾತ್ಮಕವಾದ ಸಂಕಷ್ಟವನ್ನನುಭವಿಸಿದ್ದ ಸುಮೇಶ್ ರವರು, ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಸಹಾಯವನ್ನು ಕೋರಿದರಾದರೂ, ಅದರಿಂದ ಏನೂ ಪ್ರಯೋಜನವಾಗಲಿಲ್ಲ.

ಕೊನೆಗೆ, ಇವರು ರಿಯಾದ್ ಮೂಲದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಅಡ್ವ.ಪಿ.ಎ.ಹಮೀದ್ ಪಡುಬಿದ್ರಿಯವರನ್ನು ಸಂಪರ್ಕಿಸಿ, ತಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡುವಂತೆ ಕೋರಿದರು.

ಅಡ್ವ. ಪಿ.ಎ.ಹಮೀದ್ ರವರು, ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಅವರನ್ನು ಕೂಡಲೇ ಭಾರತಕ್ಕೆ ವಾಪಸ್ ಕಳುಹಿಸುವಂತೆ ರಾಯಭಾರ ಕಚೇರಿ ಅಧಿಕಾರಿಗಳಿಗೆ ಮನವಿ ಮಾಡಿದರು. ರಾಯಭಾರ ಕಚೇರಿಯ ವಾಪಸಾತಿ ಪಟ್ಟಿಯಲ್ಲಿ ಈ ಮೂರ್ವರ ಹೆಸರನ್ನು ನೋಂದಾಯಿಸಲೂ ಪಿ.ಎ.ಹಮೀದ್ ರವರು ಅವರಿಗೆ ಸಹಾಯ ಮಾಡಿದರು.

ಅಂತಿಮವಾಗಿ, ಆವಶ್ಯಕ ಕಾನೂನು ಔಪಚಾರಿಕತೆಗಳ ನಂತರ ಅವರಿಗೆ ರಾಯಭಾರ ಕಚೇರಿಯಿಂದ ಸೌದಿಯಿಂದ ಭಾರತಕ್ಕೆ ತೆರಳಲು ಅಂತಿಮ ನಿರ್ಗಮನವನ್ನು ನೀಡಲಾಯಿತು.

ಶಿವನ್‌ಕುಟ್ಟಿ ಮತ್ತು ಮೋಹನನ್ ಮಹೇಶ್ ಕಳೆದ ವಾರ ರಿಯಾದ್‌ನಿಂದ ತಿರುವನಂತಪುರಕ್ಕೆ ತೆರಳಿದ್ದರೆ, ಸುಮೇಶ್ ರವರು ಎರಡು ದಿನಗಳ ಹಿಂದೆ ಭಾರತಕ್ಕೆ ತೆರಳಿ ಸುರಕ್ಷಿತವಾಗಿ ತಮ್ಮ ಊರು ತಲುಪಿದ್ದಾರೆ.

ಅವರು ರಾಯಭಾರ ಕಚೇರಿಯ ಅಧಿಕಾರಿಗಳಿಗೆ ತಮ್ಮ ಅಪಾರ ಧನ್ಯವಾದಗಳನ್ನು ಮತ್ತು ಅಡ್ವ. ಪಿ.ಎ.ಹಮೀದ್ ಪಡುಬಿದ್ರಿ, ರವರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಅಡ್ವ. ಪಿ.ಎ.ಹಮೀದ್ ಪಡುಬಿದ್ರಿಯವರು, ಈ ಮೂರ್ವರ ಪ್ರಕರಣಗಳಾದ್ಯಂತ ಮತ್ತು ಅವರು ಸೌದಿ ಅರೇಬಿಯಾದಿಂದ ನಿರ್ಗಮಿಸಲು ಅನುವು ಮಾಡಿಕೊಡಲು ಸಾಕಷ್ಟು ಸಹಾಯ ಮತ್ತು ಸಹಕಾರಗಳನ್ನು ನೀಡಿದ್ದರು.