Sunday, January 19, 2025
Homeಉತ್ತರ ಕರ್ನಾಟಕಗದಗನರಗುಂದ ಯುವಕನ ಹತ್ಯೆ ಪ್ರಕರಣ: ಕರ್ತವ್ಯ ಲೋಪವೆಸಗಿದ: ಸಿಪಿಐ ಅಮಾನತು

ನರಗುಂದ ಯುವಕನ ಹತ್ಯೆ ಪ್ರಕರಣ: ಕರ್ತವ್ಯ ಲೋಪವೆಸಗಿದ: ಸಿಪಿಐ ಅಮಾನತು

ನರಗುಂದ/ಗದಗ: ನರಗುಂದ ಪಟ್ಟಣದಲ್ಲಿ ನಡೆದ ಮುಸ್ಲಿಂ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಸಿಪಿಐ ನಂದೀಶ್ವರ ಕುಂಬಾರ ಅವರನ್ನು ಅಮಾನತು ಮಾಡಲಾಗಿದೆ.

ಜ. 17ರಂದು ಹಿಂದೂ ಯುವಕರಿಂದ ಮುಸ್ಲಿಂ ಯುವಕನ ಕೊಲೆಯಾಗಿತ್ತು. ಇಡೀ ಪ್ರಕರಣವನ್ನು ಸರಿಯಾಗಿ ನಿಭಾಯಿಸುವಲ್ಲಿ ಕರ್ತವ್ಯ ಲೋಪವಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಎನ್.ಸತೀಶ್ ಕುಮಾರ್ ಅವರು ಸಿಪಿಐ ನಂದೀಶ್ವರ ಕುಂಬಾರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು ತಿಳಿಸಿದ್ದಾರೆ.

ನರಗುಂದ ಪಟ್ಟಣದಲ್ಲಿ ನ. 27, 2021ರಿಂದ ಕ್ಷುಲ್ಲಕ ಕಾರಣಕ್ಕಾಗಿ ಜಗಳ, ಹಿಂಸಾತ್ಮಕ ಘಟನೆಗಳು ನಡೆಯುತ್ತಿದ್ದವು. ಜ.17ರಂದು ರಾತ್ರಿ ಮುಸ್ಲಿಂ ಯುವಕ ಸಮೀರ್ ಶಹಪೂರ (20) ಹಿಂದೂ ಯುವಕರಿಂದ ಚೂರಿ ಇರಿತಕ್ಕೆ ಒಳಗಾಗಿ ಕೊಲೆಯಾಗಿದ್ದರು. ಘಟನೆಯಲ್ಲಿ ಶಂಸೀರ್‌ ಖಾನ್‌ ಪಠಾಣ (22) ಗಾಯಗೊಂಡಿದ್ದಾರೆ.

ಆದರೆ, ಈ ಘಟನೆ ತಡೆಯುವಲ್ಲಿ ಹಾಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಎಡವಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಟ್ಟಣಕ್ಕೆ ಭೇಟಿ ನೀಡಿ ಪೊಲೀಸರ ವೈಫಲ್ಯ ಖಂಡಿಸಿದ್ದರು. ಎಲ್ಲ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು. ಜತೆಗೆ ಸಂವಿಧಾನ ಸಂರಕ್ಷಣಾ ವೇದಿಕೆ, ಬಹುತ್ವ ಕರ್ನಾಟಕ ಸತ್ಯಶೋಧನಾ ತಂಡ ಹಾಗೂ ವಿವಿಧ ಸಂಘಟನೆಗಳವರು ಕೂಡ ಘಟನೆಯನ್ನು ಖಂಡಿಸಿದ್ದರು.