ಹೊಸದಿಲ್ಲಿ: ಕರ್ನಾಟಕ ರಾಜ್ಯದಲ್ಲಿ ಹಿಜಾಬ್- ಕೇಸರಿ ಶಾಲು ಕುರಿತ ವಿವಾದದಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ಮೊಟಕಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ಶುಕ್ರವಾರ ಇಲ್ಲಿನ ಕರ್ನಾಟಕ ಭವನದೆದುರು ಪ್ರತಿಭಟನೆ ನಡೆಸಲು ಬಂದವರನ್ನು ಪೊಲೀಸರು ವಶಕ್ಕೆ ಪಡೆದರು.
ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ಗೆ ವಿರೋಧ ವ್ಯಕ್ತಪಡಿಸುವ ಮೂಲಕ ಇಸ್ಲಾಂ ಕುರಿತು ಭಯ ಹುಟ್ಟಿಸಲಾಗುತ್ತಿದೆ ಎಂದು ಘೋಷಣೆ ಕೂಗಿದ ಕೆಲವು ವಿದ್ಯಾರ್ಥಿಗಳನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ದಾರ್ ಪಟೇಲ್ ಮಾರ್ಗದಲ್ಲಿನ ಕರ್ನಾಟಕ ಭವನ-2ರ ಬಳಿ ಸತತ ಎರಡನೇ ದಿನವೂ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಗುರುವಾರವೂ ಕೆಲವು ವಿದ್ಯಾರ್ಥಿ ಸಂಘಟನೆಗಳ 100ಕ್ಕೂ ಅಧಿಕ ಸದಸ್ಯರು ಕರ್ನಾಟಕ ಭವನದೆದುರು ಪ್ರತಿಭಟನೆ ನಡೆಸಲು ಬಂದಾಗ ಪೊಲೀಸರು ವಶಕ್ಕೆ ಪಡೆದಿದ್ದರು.