ಕ್ರಿಕೆಟ್ ವಿಕಸನಗೊಂಡoತೆಲ್ಲ ಈ ಕ್ರೀಡೆ ಬ್ಯಾಟ್ಸ್ ಮನ್ ಪರವಾಗುತ್ತಿದೆ. ಎಲ್ಲಾ ಪಿಚ್ ಗಳು ಫ್ಲಾಟ್ ಆದರೆ, ಬ್ಯಾಟ್ಗಳು ಎಷ್ಟು ಪ್ರಬಲವಾಗಿವೆ ಎಂದರೆ ಮಿಸ್ ಹಿಟ್ಗಳು ಕೂಡ ಬೌಂಡರಿಯನ್ನ ಮೀರುತ್ತವೆ. ಅದರಿಂದ ಈಗಿನ ಕ್ರಿಕೆಟ್ ಪ್ರಿಯರು ಬ್ಯಾಟ್ಸ್ಮನ್ ಸಾಧನೆಯನ್ನ ಮಾತ್ರ ಗಮನಿಸುವಂತಾಗಿದೆ.
ಆದರೆ ಗೆಲುವು ಬೌಲರ್ಗಳ ಮೇಲೆ ಅವಲಂಬಿತವಾಗಿರುತ್ತದೆ ಎನ್ನುವುದು ಸತ್ಯವಾದರೆ. ಟೆಸ್ಟ್ ಮ್ಯಾಚ್ಗಳಲ್ಲಿ ಈ ಮಾತು ಪರಮ ಸತ್ಯ. ಟೆಸ್ಟ್ ಮ್ಯಾಚ್ಗಳಲ್ಲಿ ವಾಸಿಂ ಅಕ್ರಮ, ವಾಲ್ಶ್, ಅಂಬ್ರೋಸ್, ಗ್ಲೆನ್ ಮ್ಯಕ್ಗ್ರಾತ್ ನೋಡುವುದು ಒಂದು ರೋಮಾಂಚನವಾದರೆ ಸಕ್ಲೈನ್ ಮುಸ್ತಾಕ್ ಮತ್ತು ಶೇನ್ ವಾರ್ನ್ ನೋಡೋದು ಪರಮಾನಂದ.
ಶೇನ್ ವಾರ್ನ್, ಮೈಕ್ ಗ್ಯಾಟ್ಟಿಂಗ್ ಅವರನ್ನ ಔಟ್ ಮಾಡಿದ ಎಸೆತ ಯಾರು ತಾನೇ ಮರೆಯಲು ಸಾಧ್ಯ? ಅದು ನಿಜವಾಗಿಯು ಬಾಲ್ ಆಫ್ ದ ಸೆಂಚುರಿ! ಲೆಗ್ ಸ್ಟoಪ್ನಿಂದ ಎರಡು ಅಡಿ ಆಚೆ ಬಿದ್ದ ಚೆಂಡು ಸ್ಪಿನ್ ಆಗಿ ಆಫ್ ಸ್ಟoಪ್ ಉರುಳಿಸಿದ ಎಸೆತ ಶತಮಾನದ ಎಸೇತವಾಗಲೆಬೇಕು.
ಶೇನ್ ವಾರ್ನ್ ಬಗ್ಗೆ ತುಂಬಾ ಅಚ್ಚರಿ ಮೂಡಿಸುತ್ತಿದ್ದ ವಿಷಯವೆಂದರೆ ಆತ ಗಾಳಿಯಲ್ಲಿ ಚೆಂಡಿಗೆ ನೀಡುತ್ತಿದ್ದ ತಿರುವುಗಳು. ಅದೊಂದು ವಿಸ್ಮಯ. ಮತ್ತವನ ಈಸಿ ಆಕ್ಷನ್ ಹೇಗಿತ್ತು? ಯಾರೋ ಪೋಲಿಹುಡುಗನೊಬ್ಬ ತಾಯಿಯ ಒತ್ತಾಯಕ್ಕೆ ಕೈ ಚೀಲ ಹಿಡಿದು ಮಾರುಕಟ್ಟೆಗೆ ಹೋದಂತೆ!
ಒಬ್ಬ ಬೌಲರ್ಗೆ ಇರಬೇಕಾದ ದೇಹ ಶೇನ್ ವಾರ್ನ್ಗೆ ಇರಲಿಲ್ಲ ಇಂತಹ ಸರಳ ಬೌಲಿಂಗ್ ಆಕ್ಷನ್ ಮತ್ತು ಪ್ರತಿಭೆ ಇದ್ದವನಿಗೆ ಅದು ಬೇಕಾಗಿಯೂ ಇರಲ್ಲಿಲ್ಲ.
ಸಚಿನ್- ವಾರ್ನ್ ಸೆಣಸಾಟ ಕ್ರಿಕೆಟ್ ಇತಿಹಾಸದಲ್ಲಿ ಅವಿಸ್ಮರಣೀಯ. ಬಹುಶಃ ವಾರ್ನ್ನ ತಂತ್ರ ತಿರುವುಗಳನ್ನ ಸಂಪೂರ್ಣವಾಗಿ ಅರ್ಥಮಾಡಿಕೊಂಡದ್ದು ಸಚಿನ್ ಮತ್ತು ಸ್ವಲ್ಪ ಮಟ್ಟಿಗೆ ಬ್ರಯನ್ ಲಾರ ಮಾತ್ರ ಅನ್ನಿಸುತ್ತೆ. ಸಚಿನ್ ಶಾಂತ ಮೂರ್ತಿ ಮತ್ತು ಆದರ್ಶಗಳ ಭಂಡಾರವಾದರೆ, ವಾರ್ನ್ ಒಬ್ಬ flamboyant ಟಪೋರಿ. ಆತ ಮಾಡದ ತರಲೆಗಳಿಲ್ಲ, ಸಿಕ್ಕಿಹಾಕಿಕೊಳ್ಳದ ಹಗರಣಗಳಿಲ್ಲ. ಸಚಿನ್ ವಯಕ್ತಿಕ ಜೀವನ ನೇರ ಗೆರೆಯಾದರೆ, ವಾರ್ನ್ ಬದುಕು ಗುಡ್ಡದ ಅಂಕು ಡೊಂಕಾದ ಕಾಲುದಾರಿ. ಪ್ರತಿ ಕ್ಷಣವು ಉತ್ಕಟವಾಗಿ ಬದುಕಿಬಿಡಬೇಕೆಂಬ ಒಬ್ಬ intense ವಾರ್ನ್, ಆದರ್ಶಮಯ ಮೌನಿ ವಾಮನಮೂರ್ತಿ ಸಚಿನ್ ಎದುರಾದ Desert storm ಸರಣಿಯಲ್ಲಿ ಸಚಿನ್, ವಾರ್ನ್ ಎಸೆತಗಳನ್ನ ಶಾರ್ಜಾ ಕ್ರೀಡಾಂಗಣದಿಂದ ಹೊರಕಳಿಸುವಾಗ ನನ್ನ ಹೃದಯ ವಾರ್ನ್ಗಾಗಿ ಮರುಗಿದ್ದು ನಿಜ.
ಸ್ಟೀವ್ ವಾ ತಂಡದಲ್ಲಿ ವಿಶ್ವಕಪ್ ಗೆದ್ದದ್ದು, ಸೌತ್ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಾರ್ನ್ ಬೌಲಿಂಗ್, ಆಶಿಸ್ ಸರಣಿಗಳಲ್ಲಿ ಇಂಗ್ಲೆಂಡ್ ತಂಡವನ್ನ ಕಾಡಿದ್ದು, ಸಚಿನ್ ಜೊತೆ ಕ್ರಿಕೆಟಿನ ದಂತಕತೆ ಬ್ರಾಡ್ಮನ್ ಭೇಟಿಯಾಗಿದ್ದು, ಐಪಿಎಲ್ ಚೊಚ್ಚಲ ಪಂದ್ಯಾವಳಿಯಲ್ಲೆ ತುಂಬಾ ಸಾಧಾರಣ ತಂಡದ ನಾಯಕನಾಗಿ ಟ್ರೋಫಿ ಗೆಲ್ಲಿಸಿದ್ದು, ಸ್ಲಿಪ್ ನಲ್ಲಿ ಮಾರ್ಕ್ ವ ಜೊತೆನಿಂತು ಅಸಂಖ್ಯಾತ ಕ್ಯಾಚ್ ಹಿಡಿದದ್ದು, ಎಲ್ಲಕ್ಕಿಂತ ಹೆಚ್ಚಾಗಿ ಆ ತುಂಟ ನಗೆ, ಮುಳ್ಳುಗಳ ಹಾಗೆ ನಿಂತ ಹೊನ್ನ ಬಣ್ಣದ ಕೂದಲು, ವಿಕೆಟ್ ಪಡೆದಾಗ ನೆಡೆಸುತ್ತಿದ್ದ ಸಂಭ್ರಮಾಚರಣೆ… ಉಫ್… ಮರೆಯಲು ಸಾಧ್ಯವೇ??? ಹೃದಯ ಭಾರವಾಗಿದೆ ವಾರ್ನ್… ಹೋಗಿ ಬಾ…
- ಹರೀಶ್ ಗಂಗಾಧರ್
ಚಿತ್ರ ಕೃಪೆ: ಸಿಡ್ನಿ ಮಾರ್ನಿಂಗ್ ಹೆರಾಲ್ಡ್