Saturday, December 14, 2024
Homeಮಧ್ಯ ಕರ್ನಾಟಕತುಮಕೂರುಕರ್ನಾಟಕದಲ್ಲಿರುವುದು ಅತಿ ದೊಡ್ಡ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿ 150 ಸ್ಥಾನ ಗೆಲ್ಲಬೇಕು: ರಾಹುಲ್‌ ಗಾಂಧಿ

ಕರ್ನಾಟಕದಲ್ಲಿರುವುದು ಅತಿ ದೊಡ್ಡ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿ 150 ಸ್ಥಾನ ಗೆಲ್ಲಬೇಕು: ರಾಹುಲ್‌ ಗಾಂಧಿ

’ಎಲ್ಲರೂ ಒಗ್ಗಟ್ಟಿನಿಂದ ಒಂದಾಗಿ ಹೋರಾಟ ನಡೆಸುವ ಮೂಲಕ 2023ರಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆಯುವ ಗುರಿ ಹೊಂದಬೇಕು’ ಎಂದು ಪಕ್ಷದ ಮುಖಂಡ ರಾಹುಲ್ ಗಾಂಧಿ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ ಅವರು, ಚುನಾವಣೆ ಗೆಲ್ಲುವ ಸೂತ್ರಗಳನ್ನು ಬಿಚ್ಚಿಟ್ಟರು. ಜತೆಗೆ, ಬಿಜೆಪಿಯ ಕೋಮುವಾದ ಮತ್ತು ದ್ವೇಷದ ರಾಜಕಾರಣದ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ನಿರಂತರವಾಗಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

‘ವಿಧಾನಸಭೆ ಚುನಾವಣೆಯಲ್ಲಿ 150ಕ್ಕಿಂತ ಒಂದು ಸ್ಥಾನವೂ ಕಡಿಮೆಯಾಗಬಾರದು. ಅರ್ಹತೆ ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಲಾಗುವುದು. ಅಧಿಕಾರಕ್ಕೆ ಬಂದ ನಂತರವೂ ಪಕ್ಷಕ್ಕೆ ರಕ್ತ ಬಸಿಯುವವರಿಗೆ ಆದ್ಯತೆ ನೀಡಲಾಗುವುದು’ ಎಂದು ವಿವರಿಸಿದರು.

‘ದೇಶದಲ್ಲಿ ಅತಿ ದೊಡ್ಡ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ. ಇದು ಶೇ40ರ ಕಮಿಷನ್ ಪಡೆಯುವ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಸದಾ ಮಾತನಾಡುತ್ತಾರೆ. ಈಗ ಅವರು ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಎಲ್ಲರೂ ನಗುತ್ತಾರೆ’ ಎಂದು ಲೇವಡಿ ಮಾಡಿದರು.

‘ಬಿಜೆಪಿ ವಿಭಜಿಸುವ ಕಾರ್ಯದಲ್ಲಿ ತೊಡಗಿದರೆ ಕಾಂಗ್ರೆಸ್ ಜೋಡಿಸುವ ಕಾರ್ಯದಲ್ಲಿ ತೊಡಗಿದೆ. ಕರ್ನಾಟಕದಲ್ಲಿ ಜೋಡಿಸುವ ಕಾರ್ಯವನ್ನು ತೋರಿಸಬೇಕು. ಅಂತಹ ಅವಕಾಶ ನಮಗೆ ಬಂದಿದೆ’ ಎಂದು ಹೇಳಿದರು.

‘ಬಿಜೆಪಿ ನಿರುದ್ಯೋಗ ಮತ್ತು ಆರ್ಥಿಕತೆಯ ವಿಷಯಗಳ ಬಗ್ಗೆ ಬಿಜೆಪಿ ಮಾತನಾಡುವುದಿಲ್ಲ. ಹೀಗಾಗಿಯೇ ಕೋಮುವಾದದ ವಿಷಯವನ್ನು ಮುಂದಿಟ್ಟಿದೆ. ಬಿಜೆಪಿ ಸರ್ಕಾರದ ನೀತಿಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಷ್ಟಕ್ಕೆ ಒಳಗಾಗಿವೆ. ಇದರಿಂದಾಗಿ, ನಿರುದ್ಯೋಗ ಹೆಚ್ಚಿದೆ’ ಎಂದರು.