Saturday, December 14, 2024
Homeಉತ್ತರ ಕರ್ನಾಟಕಗದಗಲಂಚ ತೆಗೆದುಕೊಂಡವರು ರಶೀದಿ ಕೊಡುತ್ತಾರೆಯೇ?: ದಿಂಗಾಲೇಶ್ವರ ಶ್ರೀ ತಿರುಗೇಟು

ಲಂಚ ತೆಗೆದುಕೊಂಡವರು ರಶೀದಿ ಕೊಡುತ್ತಾರೆಯೇ?: ದಿಂಗಾಲೇಶ್ವರ ಶ್ರೀ ತಿರುಗೇಟು

ಶಿರಹಟ್ಟಿ (ಗದಗ ಜಿಲ್ಲೆ): ‘ಮಠ, ಮಂದಿರಗಳಿಗೆ ದೇಣಿಗೆ ನೀಡಿದರೆ ಅಲ್ಲಿ ರಶೀದಿ ಕೊಡುತ್ತಾರೆ. ಆದರೆ, ಲಂಚ ಪಡೆದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ದೇಣಿಗೆ ಪಾವತಿ ನೀಡುತ್ತಾರೆಯೇ?’ ಎಂದು ಲಂಚದ ಬಗ್ಗೆ ದಾಖಲೆ ಕೇಳಿದ ಸಚಿವರಿಗೆ ಫಕೀರ ದಿಂಗಾಲೇಶ್ವರ ಶ್ರೀ ತಿರುಗೇಟು ನೀಡಿದ್ದಾರೆ.

ಫಕೀರೇಶ್ವರ ಮಠದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮಠಕ್ಕೆ ಮಂಜೂರಾದ ₹75 ಲಕ್ಷ ಅನುದಾನದಲ್ಲಿ ಅಧಿಕಾರಿಗಳು ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕಿಂತ ಹೆಚ್ಚಿನ ದಾಖಲೆಯ ಅವಶ್ಯಕತೆ ಇದೆಯೇ? ರಾಜ್ಯದಲ್ಲಿ ಮುಜರಾಯಿ ಇಲಾಖೆ ಹೊರತುಪಡಿಸಿದರೆ ಎಲ್ಲಾ ಇಲಾಖೆಗಳಲ್ಲಿ ಅನುದಾನ ತೆಗೆದುಕೊಳ್ಳಲು ಎಲ್ಲ ಮಠಾಧೀಶರು ಕಮಿಷನ್ ನೀಡಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮುಂದಾಗುತ್ತಿಲ್ಲ. ಅವರನ್ನೆಲ್ಲಾ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ’ ಎಂದು ಹೇಳಿದರು.

‘ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಸಿಎಂ ಘೋಷಿಸಿರುವುದು ಖಂಡನೀಯ. ಬ್ರಾಹ್ಮಣ ಸಮುದಾಯವನ್ನು ಸದಾ ದ್ವೇಷಿಸುತ್ತಿದ್ದ ಲಿಂಗೈಕ್ಯ ಶ್ರೀಗಳು, ಭಾವೈಕ್ಯತೆಯ ಕಡುವೈರಿಯಾಗಿದ್ದಾರೆ. ವಿರೋಧ ಪಕ್ಷದ ಬೆಂಬಲದಿಂದ ಲಿಂಗಾಯತ ಸಮುದಾಯವನ್ನು ಬೇರೆ ಮಾಡಿ ರಾಜ್ಯ ಹೊತ್ತಿ ಉರಿಯುವಂತಹ ಘಟನೆ ಹುಟ್ಟುಹಾಕಿರುವುದು ಅರಿವಿಲ್ಲವೇ?’ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.

ಸಚಿವ ಸಿ.ಸಿ.ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಿ.ಸಿ.ಪಾಟೀಲರಿಗೆ ರಾಜಕೀಯ ಮಾಡಲು ಮಠಗಳು ಸಾಲುತ್ತಿಲ್ಲ. ದಿಂಗಾಲೇಶ್ವರ ಶ್ರೀಗಳನ್ನು ಬಲ್ಲೆವು ಎಂಬ ಹೇಳಿಕೆ ನೀಡಿರುವುದು ಖಂಡನೀಯ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಇತಿಹಾಸ ಹಾಗೂ ಸೈದ್ದಾಂತಿಕತೆಯನ್ನು ಮೊದಲು ಅರಿತುಕೊಳ್ಳಬೇಕು. ನಾವು ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ; ಅವರು ಅದನ್ನು ಬಿಟ್ಟು ವೈಯಕ್ತಿಕವಾಗಿ ಮಾತನಾಡಿದ್ದಾರೆ. ವೈಯಕ್ತಿಕ ಚರ್ಚೆಗೆ ವೇದಿಕೆ ನಿರ್ಮಿಸಿದರೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಿದ್ದೇನೆ’ ಎಂದು ಹೇಳಿದರು.

‘500 ವರ್ಷಗಳ ಭವ್ಯ ಪರಂಪರೆಯ ಹೊಂದಿರುವ ಫಕೀರೇಶ್ವರ ಮಠವು ಶಾಖಾ ಮಠ ಹಾಗೂ ಶಾಖಾ ಮಸೀದಿಗಳನ್ನು ಹೊಂದಿ ದೇಶದಲ್ಲೇ ಭಾವೈಕ್ಯತೆಯ ಕೇಂದ್ರವೆಂದು ಗುರುತಿಸಿಕೊಂಡಿದೆ. ರಾಜಕಾರಣಿಗಳಿಗೆ ಇತಿಹಾಸ ಓದಲು ಸಮಯ ಇಲ್ಲ ಎನಿಸುತ್ತದೆ. ಒಂದು ನಿರ್ಣಯ ತೆಗೆದುಕೊಳ್ಳಬೇಕಾದರೆ ಅದರ ಬಗ್ಗೆ ತಜ್ಞರ ಸಲಹೆ ಪಡೆದು ನಿರ್ಣಯ ತೆಗೆದುಕೊಳ್ಳುವ ಬಹುತೇಕ ಸರ್ಕಾರವನ್ನು ಕಂಡಿದ್ದೇವೆ. ಅದನ್ನು ಬಿಟ್ಟು ಅವರಿವರ ಮೇಲೆ ಇಲ್ಲಸಲ್ಲದ ಅರೋಪ ಮಾಡುವುದು ತರವಲ್ಲ’ ಎಂದು ಕಿಡಿಕಾರಿದರು.

‘ತೋಂಟದಾರ್ಯ ಮಠ ಹಾಗೂ ಫಕೀರೇಶ್ವರ ಮಠದ ನಡುವೆ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಕೈಬಿಡಬೇಕು. ನೀವು ನಿಮ್ಮ ಮನೆ ಹಾಗೂ ವೈಯಕ್ತಿಕ ಜೀವನದ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳಬಹುದು. ಆದರೆ, ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗ ಅದನ್ನು ಪ್ರಶ್ನಿಸುವ ಅಧಿಕಾರ ನಮಗಿದೆ. ಗುರು-ಶಿಷ್ಯರ ತೇಜೋವಧೆ ಮಾಡುತ್ತಿರುವ ಸಚಿವರು ತಾವು ನೀಡಿರುವ ಹೇಳಿಕೆಯನ್ನು ಪರಾಮರ್ಶಿಸಬೇಕು. ಹಠಕ್ಕೆ ಬಿದ್ದು ನೀವು ಮುಂದುವರಿದರೆ ನಾವೂ ಕೂಡ ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಸಚಿವ ಬಿ.ಸಿ.ಪಾಟೀಲ ಮತ್ತೊಬ್ಬರನ್ನು ಬಣ್ಣ ಬದಲಿಸುವ ಊಸರವಳ್ಳಿ ಎಂದು ಹೇಳುವ ಮೊದಲು, ಅಧಿಕಾರದ ಆಸೆಗಾಗಿ ಊಸರವಳ್ಳಿ ಗುಣಗಳನ್ನು ಅಳವಡಿಸಿಕೊಂಡವರು ಯಾರು ಎಂದು ಮೊದಲು ಅರಿಯಬೇಕು. ರಾಜಕೀಯ ಗುಂಗಿನಲ್ಲಿ ಪ್ರಜ್ಞಾಹೀನರಾಗಬಾರದು’ ಎಂದರು.