Saturday, December 14, 2024
Homeಸುದ್ದಿರಾಜ್ಯನಂಬಿಕೆ, ಮೂಢನಂಬಿಕೆ ಮತ್ತು ಸಾಂಸ್ಕೃತಿಕ ಆಚರಣೆಗಳು- ಸಂ random ಥಾಟ್ಸ್

ನಂಬಿಕೆ, ಮೂಢನಂಬಿಕೆ ಮತ್ತು ಸಾಂಸ್ಕೃತಿಕ ಆಚರಣೆಗಳು- ಸಂ random ಥಾಟ್ಸ್

ಗೆಲಿಲಿಯೋ ಟೆಲಿಸ್ಕೋಪ್ ಕೊಂಡು ಹಿಡಿದು ಅದರ ಮೂಲಕ ಆಗಸವನ್ನು ನೋಡಲು ತನ್ನ ಸಹಪಾಠಿಗಳನ್ನ ಕರೆದನಂತೆ. ಗುರು ಗ್ರಹದ ಸುತ್ತ ಇದ್ದ ಮೂರು ಉಪಗ್ರಹಗಳನ್ನ ಕಣ್ಣಾರೆ ನೋಡಿಬಿಡಿ ಎಂದು ಆಹ್ವಾನ ನೀಡಿದನಂತೆ. ಆ ದಿನಗಳಲ್ಲಿ ಎಲ್ಲರು ಅರಿಸ್ಟಾಟಲ್ನನ್ನ ಮಾತ್ರ ನಂಬುತ್ತಿದ್ದರಂತೆ. ಅರಿಸ್ಟಾಟಲ್ ಪ್ರಸ್ತಾಪಿಸದ ಯಾವ ವಿಷಯವು ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ ಅಂತ ಜನ ನಂಬಿದ್ದರಂತೆ. ” Any thing that Aristotle did not say, did not exist.” ಗೆಲಿಲಿಯೋನ ಎಲ್ಲಾ ಸಹಪಾಠಿಗಳು ಅರಿಸ್ಟಾಟಲ್ನ ನಂಬುವವರಾಗಿದ್ದರು. ಅದರಿಂದ ಸಹಪಾಠಿಗಳು “ನೀನು ನೋಡುತ್ತಿರುವುದು ಗುರುಗ್ರಹವಲ್ಲ. ಅದಕ್ಕೆ ಮೂರು ಉಪಗ್ರಹಗಳೂ ಇಲ್ಲ. ನಿನ್ನ ಟೆಲಿಸ್ಕೋಪ್ ಲೆನ್ಸ್ ಮೇಲೆ ಮೂರೂ ಕಲೆಗಳಿರಬೇಕು ನೋಡು” ಎಂದು ಗೆಲಿಲಿಯೋವನ್ನ ಗೇಲಿ ಮಾಡಿದರಂತೆ. ನಿರಾಶನಾಗದ ಗೆಲೆಲಿಯೋ “ನಾನು ಲೆನ್ಸ್ ಕ್ಲೀನ್ ಮಾಡುವೆ ನಂತರ ನೋಡಿ, ಆಗಲು ನಿಮಗೆ ಮೂರು ಉಪಗ್ರಹಗಳು ಕಾಣುತ್ತವೆ” ಎಂದನಂತೆ. ಅವನ ಸಹಪಾಠಿಗಳು ಟೆಲಿಸ್ಕೋಪ್ ಮೂಲಕ ನೋಡದೆ “ನಿನ್ನ ಕಣ್ಣುಗಳಲ್ಲೇ ಏನೋ ದೋಷವಿದೆ ಬಿಡೋ” ಎಂದು ನಕ್ಕರಂತೆ. ಗೆಲೆಲಿಯೋ ” ನೀವೇ ಒಮ್ಮೆ ನೋಡಿಬಿಡಿ” ಎಂದು ಮನವಿ ಮಾಡಿದರು “ನಿನ್ನ ತಲೆ ಸರಿಯಿಲ್ಲ ಬಿಡೋ” ಎಂದು ಹೊರಟುಹೋದರಂತೆ. ಗೆಲಿಲಿಯೋ ಸಹಪಾಠಿಗಳಿಗೆ ಅರಿಸ್ಟಾಟಲ್ ಮಾತುಗಳ ಮೇಲಿದ್ದ ಅಚಲ ನಂಬಿಕೆ ಅವರನ್ನ ಕುರುಡಾಗಿಸಿತ್ತು. ಈ ರೀತಿಯ ನಂಬಿಕೆ ಶಬ್ದ ಪ್ರಮಾಣದ ನಂಬಿಕೆ. ತಮಗೆ ಬೇಕಾಗಿರುವ ಎಲ್ಲ ಜ್ಞಾನವನ್ನು ನಮ್ಮ ಗುರುಗಳಾದ ಅರಿಸ್ಟಾಟಲ್ ನೀಡಿದ್ದಾರೆ. ನಾವು ಮತ್ತೇನನ್ನೂ ಕಣ್ತೆರದು ನೋಡುವ ಅವಶ್ಯಕೆತೆಯಿಲ್ಲ ಎನ್ನುವ ನಂಬಿಕೆ ಇದು.

ಟೆಲಿಸ್ಕೋಪ್ ಕಂಡುಹಿಡಿದ ಗೆಲಿಲಿಯೋ ಮುಂದುವರೆದು ಸೂರ್ಯ ಭೂಮಿಯ ಸುತ್ತ ಸುತ್ತುವುದಿಲ್ಲ ಬದಲಾಗಿ ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದು ಹೇಳಿದನಂತೆ. ಇಡೀ ಯೂರೋಪ್ ಈ ವಾದದಿಂದ ಆತಂಕಕ್ಕೆ ಒಳಗಾಯಿತಂತೆ. ಅಲ್ಲಿಯವರೆಗೆ ಯೂರೋಪಿನ ಯಾವುದೇ ವಿಶ್ವವಿದ್ಯಾಲಯದಲ್ಲಿ ಭೂಮಿ ಸೂರ್ಯನ ಸುತ್ತ ಸುತ್ತುತದೆಯೆಂದು ಹೇಳಿಕೊಟ್ಟಿರಲಿಲ್ಲ. ಅವರಿಗೆಲ್ಲ “ನಮಗೆ ಬೆಳಕ ನೀಡಲು ಕರ್ತನು ಆಗಸದಲ್ಲಿ ಸೂರ್ಯ ಚಂದ್ರನನ್ನು ಸ್ಥಾಪಿಸಿದ್ದಾನೆ” ಎಂಬ ಬೈಬಲ್ ವಾಕ್ಯದ ಮೇಲೆ ಎಲ್ಲಿಲ್ಲದ ನಂಬಿಕೆ. ಬೈಬಲ್ ಶ್ರೇಷ್ಠವೊ ಅಥವಾ ಗೆಲಿಲಿಯೋ ಶ್ರೇಷ್ಠನೊ ಎಂಬ ಪ್ರಶ್ನೆ ಉದ್ಭವವಾಯಿತು. ಗೆಲಿಲಿಯೋ ಚರ್ಚಿನ ಮುಂದೆ ಹಾಜರಾಗಬೇಕೆಂದು ಆಜ್ಞೆಯಾಯಿತು. “ನೀನು ಎಸೆಗಿರುವ ಘನಘೋರ ಅಪರಾಧಕ್ಕೆ ನಿನಗೆ ಮರಣದಂಡನೆ ವಿಧಿಸಲಾಗುವುದುದೆಂದು” ಚರ್ಚ್ ಗುಡುಗಿತು. ಮಂಡಿಯೂರಿ, ಅಪರಾಧ ಒಪ್ಪಿಕೊಂಡು ಕ್ಷಮೆಯಾಚಿಸಿದರೆ ಮರಣದಂಡನೆ ಬದಲಾಗಿ ಶಿಕ್ಷೆಯನ್ನ ಸೆರೆಮನೆವಾಸಕ್ಕೆ ಮುಟುಕುಗೊಳಿಸಲಾಗುವುದೆಂದು ಚರ್ಚ್ ಹೇಳಿತು. “ನಾನು ತಪ್ಪು ಮಾಡಿದೆ. ನಾನು ಮತ್ತೆಂದೂ ಈ ತಪ್ಪು ಮಾಡುವುದಿಲ್ಲ. ನಾನು ಬೈಬಲಿನ ಹೇಳಿಕೆಯನ್ನು ಒಪ್ಪುವೆ. ಹೌದು ಭೂಮಿ ಸೂರ್ಯನ ಸುತ್ತುವುದಿಲ್ಲವೆಂಬುದೇ ಸತ್ಯ” ಎಂದೇಳಿ ಗೆಲೆಲಿಯೋ ಮರಣದಂಡನೆಯಿಂದ ತಪ್ಪಿಸಿಕೊಂಡನಂತೆ. ಜನರ ಈ ನಂಬಿಕೆ ಗ್ರಂಥ ಪ್ರಮಾಣದ ನಂಬಿಕೆ.

ದಾಬೋಲ್ಕರ್ ಹೇಳುವ ಹಾಗೆ ಜನ ಸಾಮಾನ್ಯವಾಗಿ ತಮ್ಮ ನಂಬಿಕೆಗಳನ್ನ ತಾವೇ ಪರೀಕ್ಷೆಗೆ ಒಳಪಡಿಸಿಕೊಳ್ಳುವುದಿಲ್ಲ ಜೊತೆಗೆ ಬೇರೆಯವರು ಆ ನಂಬಿಕೆಗಳನ್ನ ಪರೀಕ್ಷಿಸುವುದನ್ನಾಗಲಿ ಸಹಿಸುವುದಿಲ್ಲ. ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ದೊಡ್ಡ ದೊಡ್ಡ ಸಭೆಗಳಲ್ಲಿನ ಪಾದ್ರಿಯ ಸ್ಪರ್ಶದಿಂದ ನಿಜವಾಗಲೂ ಕ್ಯಾನ್ಸರ್ ಗುಣವಾಗುವುದೇ, ಅಂಧರಿಗೆ ದೃಷ್ಟಿ ಪ್ರಾಪ್ತವಾಗುವುದೆ ಎಂದು ಯಾವ ಕ್ರಿಶ್ಚಿಯನ್ ಮಿಷನರಿ ಕೂಡ ಪರೀಕ್ಷಿಸಿಕೊಳ್ಳುವುದಿಲ್ಲ. ಅದೇ ರೀತಿ Muslim men dont owe maintenance to their divorced wife ಎಂದು ಮೌಲ್ವಿಗಳು ಇಂದಿಗೂ ಪ್ರತಿಪಾದಿಸುತ್ತಾರೆ. ಅವರನ್ನ ಮತ್ತಷ್ಟೂ ಪ್ರಶ್ನಿಸಿದರೆ ” we are not going to tolerate any meddling into our faith in our religious books!” ಎಂಬ ಧಮ್ಕಿ ಬರುತ್ತೆ. ಅದೇ ರೀತಿ ನೂರಾರು ನಕಲಿ ಸ್ವಾಮೀಜಿಗಳು ಹೇಳುವ ಹಸಿ ಹಸಿ ಸುಳ್ಳುಗಳನ್ನ, ಅವರು ಎಲ್ಲೆಡೆ ಹರಡುವ ಮೂಢನಂಬಿಕೆಗಳನ್ನ, ಅಧ್ಯಾತ್ಮದ ಹೆಸರಲ್ಲಿ ನೆಡೆಸುತ್ತಿರುವ ದಂಧೆಯನ್ನ ಪ್ರಶ್ನಿಸಿದರೆ ಭಕ್ತರ ಕಣ್ಣುಗಳಲ್ಲಿ ಅದು ದೊಡ್ಡ ಪ್ರಮಾದವಾಗುತ್ತದೆ ಎನ್ನುತ್ತಿದ್ದರು ದಾಬೋಲ್ಕರ್.

ಆದರೆ ಈ ಪ್ರಶ್ನಿಸಿಕೊಳ್ಳುವ ಅಭ್ಯಾಸ, ನಿರಂತರ ಪರೀಕ್ಷೆಗೆ ಒಳಪಡಿಸಿಕೊಳ್ಳುವ ಪ್ರಕ್ರಿಯೆಯಿಂದಲೇ ಮನುಕುಲದ ಪ್ರಗತಿ ಸಾಧ್ಯ. ಸಿಡಿಲು, ಮಿಂಚು, ಗುಡುಗುಗಳೇಕಿವೆ? ಧಾರಾಕಾರ ಮಳೆಯೇಕೆ ಸುರಿಯುತ್ತದೆ? ಕಾಡ್ಗಿಚ್ಚಿನ ಜನನ ಹೇಗಾಗುತ್ತದೆ? ಜ್ವಾಲಾಮುಖಿ ಏಕೆ ಸ್ಪೋಟಗೊಳ್ಳುತ್ತದೆ? ಚಂಡಮಾರುತ ಭೂಕಂಪನ ಸೃಷ್ಟಿಸುವವರು ಯಾರು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕದಿದ್ದಾಗ ಯಾವುದೊ ಅಲೌಕಿಕ ಶಕ್ತಿಯೊಂದು ಇದಕ್ಕೆ ಕಾರಣವೆಂದು ಆದಿ ಮಾನವರು ನಂಬಿದ್ದರು. ಅದೇ ರೀತಿ ಭೂಮಿ, ಜಲ, ಬೆಂಕಿ, ಗಾಳಿ ಹಾಗು ಆಗಸವನ್ನ ಅಲೌಕಿಕ ಶಕ್ತಿಯುಗಳೆಂದು ಪೂಜಿಸುತ್ತಿದ್ದರು. ಅವುಗಳನ್ನ ದೇವತೆಗಳೆಂದು ಪರಿಗಣಿಸಿ ಅವಕ್ಕೆ ಬಲಿಕೊಡುತ್ತಿದ್ದರು, ಅವುಗಳ ಮುಂದೆ ಪ್ರಾಯಶ್ಚಿತ್ತ ಮಾಡಿಕೊಳ್ಳುತಿದ್ದರು. ವಿಜ್ಞಾನ ಮುಂದುವರೆದಂತೆ ಈ ನಂಬಿಕೆಗಳು ಹಾಗೆ ಉಳಿದಿಲ್ಲ. ನಾವು ಇಂದು ಬೆಂಕಿ ಕಡ್ಡಿ ಗೀರಿ ಗ್ಯಾಸ್ ಸ್ಟೋವ್ ಹಚ್ಚುವಾಗ “ಓ ಅಗ್ನಿದೇವನೇ ನನಗೆ ಅಡಿಗೆ ಮಾಡುವ ಶಕ್ತಿಕೊಡು” ಎಂದು ಬೇಡಿಕೊಳ್ಳುವುದಿಲ್ಲ. ಒಂದಾನೊಂದು ಕಾಲದಲ್ಲಿ ದೇವರಾಗಿದ್ದ ಬೆಂಕಿ ಇಂದು ಒಂದು ಸರಳ ಕೆಮಿಕಲ್ ರಿಯಾಕ್ಷನ್ ಅಷ್ಟೇ! ಅದೇ ರೀತಿ ಕೋಪೋರ್ನಿಕಸ್, ಡಾರ್ವಿನ್, ಮಾರ್ಕ್ಸ್ ನಂತವರು ನಮ್ಮ ಇಡಿಯ belief ಸಿಸ್ಟಮ್ನನ್ನೇ ಬುಡಮೇಲು ಮಾಡಿದರು.

ಅಜ್ಞಾನದಿಂದ ಹುಟ್ಟುವ ಹಲವು ಮೂಢನಂಬಿಕೆಗಳು ಕಾಲಾನಂತರ ಕಣ್ಮರೆಯಾಗಿವೆ. ಅತಿಯಾದ ಜ್ವರ ಬಂದು, ಮೈಯೆಲ್ಲಾ ಹುಣ್ಣು ಕಾಣಿಸಿಕೊಂಡು ರೋಗಿಗಳನ್ನ ವಿಕಾರಗೊಳಿಸುತ್ತಿದ್ದ ಸಿಡುಬು ರೋಗ (Small Pox) ಇಂದಿಲ್ಲ. ಮಾನವನಿಂದ ಮಾನವರಿಗೆ ಹರಡುವ ಈ ರೋಗಕ್ಕೆ ಲಸಿಕೆ ಕಂಡುಹಿಡಿದ ಮೇಲೆ ಬರಿ ರೋಗ ಮಾಯವಾಗದೆ ರೋಗದ ಹೆಸರಲ್ಲಿ ಹುಟ್ಟಿಕೊಂಡಿದ್ದ ಹಲವಾರು “ಅಮ್ಮ” ದೇವಾಲಯಗಳು, ಅವಕ್ಕೆ ಅಂಟಿಕೊಂಡಿದ್ದ ಮೂಢನಂಬಿಕೆಗಳೂ ಮಾಯವಾದವು. ಜ್ಞಾನ ಅಜ್ಞಾನವನ್ನ ಓಡಿಸಿದ ಬಗೆ ಇದು.
ಇನ್ನು ಕೆಲ ಅಮಾನವೀಯ ಮೂಢನಂಬಿಕೆಗಳು ಕೂಡ ಕಾಲಾನಂತರ ಮಾಯವಾಗುತ್ತವೆ. ದೇವದಾಸಿ ಪದ್ಧತಿ, ಸತಿ ಪದ್ಧತಿ ಒಳ್ಳೆಯ ಉದಾಹರಣೆಗಳಾಗಬಹುದು. ವಾರಾಣಸಿಯಲ್ಲಿ ಮೃತ ಗಂಡನ ದೇಹದ ಜೊತೆ ಆತನ ಮಡದಿ ಚಿತೆ ಏರಿದನ್ನ ಲಾರ್ಡ್ ಬೆಂಟಿಕ್ ನೋಡಿದ. ಜನರ ಪ್ರತಿರೋಧದ ನಡುವೆಯೂ ಅವಳನ್ನ ರಕ್ಷಿಸಿದ. ಮುಂದಿನ ದಿನ ಇಡೀ ವಾರಾಣಸಿಯ ಜನರು ಪ್ರತಿಭಟನಾ ಮೆರವಣಿಗೆ ನೆಡೆಸಿದರು. ಶಾಸ್ತ್ರಿಗಳು, ಪಂಡಿತರು ಅಲಹಾಬಾದ್ ನ್ಯಾಯಾಲಯದಲ್ಲಿ ದಾವೆ ಹೂಡಿದರು. ನಮ್ಮ ಧಾರ್ಮಿಕ ನಂಬಿಕೆಗಳಲ್ಲಿ ಈಸ್ಟ್ ಇಂಡಿಯಾ ಕಂಪನಿ ಮೂಗು ತೋರಿಸಬಾರದೆಂದು ತಾಕೀತು ಮಾಡಿದರು. ಬೆಂಟಿಕ್ ಬಗ್ಗಲಿಲ್ಲ. ಸತಿ ಪದ್ದತಿಯನ್ನ ನಿಷೇಧಿಸಿದ. ಅಂದು ಮಾನಸಿಕವಾಗಿ ಘಾಸಿಗೊಂಡಿದ್ದ ಹಿಂದೂಗಳು ಇಂದು ಎಲ್ಲಾದರೂ ಸತಿ ಸಹಗಮನ ನೆಡೆದಿದೆ ಎಂದು ತಿಳಿದರೆ ಅದನ್ನ ಉಗ್ರವಾಗಿ ಖಂಡಿಸುತ್ತಾರೆ. ಅದೇ ರೀತಿ ನಗರೀಕರಣ ಮತ್ತು ಅಲ್ಲಿನ ವೇಗ ಅಸ್ಪೃಶ್ಯತೆಯನ್ನಇಲ್ಲವಾಗಿಸಿದೆ. ತುಂಬಿದ ಬಸ್ ಅಥವಾ ರೈಲುಗಳಲ್ಲಿ ಅಸ್ಪೃಶ್ಯತೆ ಪಾಲಿಸುವುದಾದರೂ ಹೇಗೆ? ಮುಟ್ಟಾದ ಹೆಂಗಸು ಒಂದು ಮೂಲೆಯಲ್ಲಿ ಕೂರುವ ಕಾಲವು ಇಂದಿಲ್ಲ. ಪ್ಯಾಡ್ ಮತ್ತು ಸಬಲೀಕರಣ ತಂದ ಬದಲಾವಣೆಯಿದು.

( ಅಸ್ಪೃಶ್ಯತೆ ಪಾಲಿಸಲಾಗದಿದ್ದರು ಜಾತಿ /ಧರ್ಮದ ನಂಟನ್ನು ನಾವಿನ್ನು ಬಿಟ್ಟಿಲ್ಲ. ಅಂತರ್ಜಾತಿ ವಿವಾಹ ಇಂದಿಗೂ ಒಂದು ಸಾಹಸ, ಮುಟ್ಟದ ಹೆಂಗಸು ಇಂದಿಗೂ ತಾನು polluted ಎಂದು ಅಂದುಕೊಳ್ಳುವುದನ್ನೂ ನಿಲ್ಲಿಸಿಲ್ಲ)

ಪ್ರಖ್ಯಾತ ನಾಟಕಕಾರ ವಿಜಯ್ ತೆಂಡೂಲ್ಕರ್ ಒಮ್ಮೆ ” Don’t you think people become superstitious out of their need?” ಅಂತ ಪ್ರಶ್ನೆ ಕೇಳಿದ್ದರು. ಯೋಚನೆ ಮಾಡಬೇಕಾದಂತಹ ಪ್ರಶ್ನೆ ಇದು. ಆಘಾತಕಾರಿ, ಅಹಿತಕರ ಘಟನೆಗಳನ್ನ ಎದುರಿಸಿ ಬದುಕಲು ಮೂಢನಂಬಿಕೆಗಳು ಸಹಾಯಕ. ಆಘಾತಗಳು ನಮ್ಮ ವ್ಯಕ್ತಿತ್ವಗಳನ್ನೇ ನಾಶಮಾಡಿಬಿಡಬಹುದು ಅಂತಹ ಸಮಯದಲ್ಲಿ ಸಾಕಷ್ಟು ಮಂದಿ ಮೂಢನಂಬಿಕೆಗಳ ಮೊರೆಹೋಗುತ್ತಾರೆ. ಮೂಢನಂಬಿಕೆಗಳು ವಾಹನಗಳ ಶಾಕ್ absorbers ಇದ್ದ ಹಾಗೆ. ನಾವು ದಿನ ನಿತ್ಯ ಓಡಾಡುವ ದಾರಿಗಳ ಹಾಗೆಯೇ ಬದುಕಿನ ಹಾದಿಯಲ್ಲೂ ಗುಂಡಿಗಳು ಉಬ್ಬುಗಳು ಇದ್ದೇ ಇರುತ್ತವೆ. ಮನೆಯಲೊಬ್ಬರಿಗೆ ಮಾರಣಾಂತಿಕ ಕಾಯಿಲೆ ಎಂದುಕೊಳ್ಳಿ. ಸ್ಥಿತಿ ಗಂಭೀರವಾಗಿದೆ. ವೈದ್ಯರು ಚಿಕಿತ್ಸೆ ಶುರು ಮಾಡಿದ್ದೇವೆ ರೋಗಿ ಚೇತರಿಸಿಕೊಳ್ಳಬಹುದು ಎಂಬ ಆಶ್ವಾಸನೆ ನೀಡಿದ್ದಾರೆ. ಈ ಸಮಯದಲ್ಲಿ ರೋಗಿಯ ಮನೆಯವರು ಬಾಬಾ ಕೊಟ್ಟ ತಾಯ್ತ ಅಥವಾ ಸ್ವಾಮೀಜಿ ಕೊಟ್ಟ ವಿಭೂತಿ ಹಚ್ಚುವುದು ತರ್ಕಬಾಹಿರವಾದರು ಒಪ್ಪಿಕೊಳ್ಳಬಹುದು. ಆದರೆ ಕಾಲೇಜಿಗೆ ಹೋಗುವಾಗ, ರೋಡ್ ದಾಟುವಾಗ, ಪರೀಕ್ಷೆ ಬರೆಯುವಾಗ, ಕೆಲಸ ಗಿಟ್ಟಿಸಿಕೊಳ್ಳಲು ಸಂದರ್ಶನ ಅಟೆಂಡ್ ಮಾಡುವಾಗ ವಿಭೂತಿ ಬಳಿದುಕೊಳ್ಳಲು ಶುರು ಮಾಡಿದರೆ ನೀವು ಬರಿ ಮೂಢನಂಬಿಕೆಯಲ್ಲಿಲ್ಲ ಅದನ್ನ ಮೀರಿ ಮೂಢನಂಬಿಕೆಗೆ ಶರಣರಾಗಿದ್ದೀರಿ ಅಂತಲೇ ಅರ್ಥ. When you surrender to superstitions, you are no more a human being that reasons. ಈ ಸಣ್ಣ ವ್ಯತ್ಯಾಸದ ಕುರಿತ ನಮಗೆ ಅರಿವಿರಬೇಕು.

(ನಂಬಿಕೆಗೆ ಯಾವಾಗಲು ಭಾವನೆಗಳ ಬಣ್ಣವಿರುತ್ತದೆ. ಭಾವನೆಗಳಿಲ್ಲದ ಬರಿಯ ಬುದ್ದಿಜೀವಿ ಯಾರು ಇರಲಾರರು. ಆಂಗ್ಲ ಭಾಷೆಯಲ್ಲಿ trust ಮತ್ತು faith ಎಂಬ ಎರಡು ಪದಗಳಿವೆ. ಎರಡೂ ಪದಗಳ ಕನ್ನಡ ಅನುವಾದ ನಂಬಿಕೆ ಅನ್ನೋದೊಂದೇ ಇದೆ. ಆದರೆ Trust ಅನ್ನೋದು faith ಪದಕ್ಕಿಂತ ವಿಭಿನ್ನವಾದುದು. Trust ಆಲೋಚನೆ ಚಿಂತನೆಗಳಿಗೆ ಆದ್ಯತೆ ನೀಡಿದರೆ. Faith ಅನ್ನೋದು ಭಾವನೆಗಳಿಂದ ಬೆಳೆದು ಸತ್ಯದ ನೆಲೆಯಲ್ಲಿರುವ ಆಲೋಚನೆಯಾಗಿ ಮುಂದೆ ಅದು ಪ್ರೇರಕ ಮೌಲ್ಯವಾಗುತ್ತದೆ. ಆಲೋಚನೆಗಳನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಿ ಬರಿಯ ಭಾವನೆಗಳೇ ನಿಮ್ಮನ್ನು ಆಳಲು ಬಿಟ್ಟುಬಿಟ್ಟಾಗ ಅದು ಮೂಢನಂಬಿಕೆಯಾಗುತ್ತದೆ.)

ವಸ್ತುಸ್ಥಿತಿ ಹಾಗು ಸತ್ಯಂಶಗಳ ಆಧಾರದ ಮೇಲೆ ಯಾವ ನಂಬಿಕೆ ಪರಿಶೀಲನೆಗೆ ಒಳಪಡಲು ಸಿದ್ಧವಿರುವುದಿಲ್ಲವೊ ಅದು ಮೂಢ ನಂಬಿಕೆಯಾಗಿರುತ್ತದೆ. ಇಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ನೀಡುವ ಉದಾಹರಣೆ ಬಳಸಿಕೊಳ್ಳುವುದು ಸೂಕ್ತ- ನೀವು ರಸ್ತೆಯಲ್ಲಿ ಹೋಗುವಾಗ ಹೊಳೆಯುವ ಹಳದಿ ಬಣ್ಣದ ಲೋಹ ಸಿಕ್ಕಿತು ಎಂದುಕೊಳ್ಳಿ. ಚಿನ್ನ ಸಿಕ್ಕಿತೆಂದು ತಕ್ಷಣ ಖುಷಿಯಿಂದ ಕುಣಿದಾಡುವಿರಿರೇನು? ಇಲ್ಲ ಮನದಲ್ಲಿ ವಿಚಾರ ಮಾಡುವಿರಿ, ನಿಮ್ಮೊಡನೆಯೇ ವಾದಿಸುವಿರಿ, ಅದನ್ನ ಪರೀಕ್ಷೆಗೆ ಒಳಪಡಿಸುವಿರಿ. ಹೊಳೆಯುವುದು ಚಿನ್ನ ಮಾತ್ರ ತಾಮ್ರ ಹೊಳೆಯುವುದಿಲ್ಲ. ಆದರೂ ಹೀಗೇಕೆ ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳುವಿರಿ? ಒಂದು ಲೋಹದ ಬಗ್ಗೆ ಇಷ್ಟೆಲ್ಲಾ ಕಾಳಜಿ ವಹಿಸುವ ನೀವು ನಿಮ್ಮ ಜೀವನಾಧಾರವಾಗಿರುವ, ಮಾರ್ಗದರ್ಶಿಯಾಗಿರುವ ಮೌಲ್ಯಗಳನ್ನ, ನಂಬಿಕೆಗಳನ್ನೇಕೆ ಪರೀಕ್ಷೆಗೆ ಒಳಪಡಿಸುವುದಿಲ್ಲ? You ought to put your faith to the test of the fire of truth ಎನ್ನುತ್ತಾರೆ ಅಂಬೇಡ್ಕರ್.

ನಂಬಿಕೆ, ಮೂಢನಂಬಿಕೆ, ಆಲೋಚನೆಗಳನ್ನ ಮೀರಿದ ಕೆಲ exploitative ಅಲ್ಲದ ಸಾಂಸ್ಕೃತಿಕ ಆಚರಣೆಗಳು ನಮ್ಮ ಭಾರತೀಯರ ಸ್ಮೃತಿಯಲ್ಲಿದೆ. ಅದು ಶಬ್ಧದಿಂದಲೋ ಅಥವಾ ಗ್ರಂಥಗಳ ಪ್ರಭಾವದಿಂದಲೋ ಜನರ ಮನದಲ್ಲಿ ನೆಲೆಯೂರಿದೆ. ಉದಾಹರಣೆಗೆ-

ನಮ್ಮೂರ್ ದೇವರು ಚೌಡಮ್ಮ. ಒಮ್ಮೆ ನಮ್ಮೂರಿಗೆ ತಿರುಪತಿ ತಿಮ್ಮಪ್ಪ ಬಂದಿದ್ದನಂತೆ. ಚೌಡಮ್ಮ ಮತ್ತು ತಿಮ್ಮಪ್ಪನಿಗೂ ಯಾವುದೊ ಕಾರಣಕ್ಕೆ ವಾಗ್ವಾದ ನಡೆದು, ಮಾತಿನ ಚಕುಮುಕಿಯಲ್ಲಿ ಕೋಪಗೊಂಡ ಚೌಡಮ್ಮ ತಿಮ್ಮಪ್ಪನನ್ನು ಅಟ್ಟಿಸಿಕೊಂಡು ಹೋದಳಂತೆ. ಊರಿನ ಅಂಚಿಗಿರುವ ಕಾಟ್ಮಪ್ಪ ಗುಡಿಯ ಬಳಿ ಒಂದು ಬಂಡೆ ಮೇಲಿಂದ ತಿಮ್ಮಪ್ಪ ಜಿಗಿದು ತಿರುಮಲದಲ್ಲಿ ನೆಲೆಸಿದನಂತೆ. ತಿರುಮಲಕ್ಕೆ ಜಿಗಿಯುವ ಮುನ್ನ ತಿಮ್ಮಪ್ಪ ಊರಿದ ಪಾದದ ಗುರುತು ಇನ್ನೂ ಕೂಡ ಕಾಟ್ಮಪ್ಪ ದೇವಾಲಯದ ಹತ್ತಿರವಿದೆ. ಇಂದಿಗೂ ಚೌಡಮ್ಮನ ಒಕ್ಕಲು ತಿರುಪತಿಗೆ ಎಂದು ಹೋಗಲ್ಲ. ಮುಡಿ ಕೊಡುವ ಪ್ರಶ್ನೆಯೇ ಇಲ್ಲ. ಹೊಸ ಪೀಳಿಗೆ ಹುಡುಗರು ಯಾರಾದ್ರೂ ಅಪ್ಪಿತಪ್ಪಿ ತಿರುಮಲಕ್ಕೆ ಹೋದರೆ ತೀವ್ರ ಬೈಗುಳವನ್ನ ಎದುರಿಸಬೇಕಾಗುತ್ತದೆ. ತಿರುಪತಿಯಲ್ಲಿ ಕೋಟ್ಯಂತರ ಜನ ಸೇರಬಹುದು ಆದರೆ ತಿರುಪತಿ ಕಡೆ ತಿರುಗಿ ನೋಡದ ಒಂದು ಸಮುದಾಯ ನಮ್ಮೂರಿನ ಚೌಡಮ್ಮನ ಜಾತ್ರೆಗೆ ಸೇರುತ್ತದೆ.

ನಾವು so called ವಿಚಾರವಾದಿ ಸದಾ ಧರ್ಮಾಂಧತೆ, ಧರ್ಮ ಮತ್ತು ಶೋಷಣೆ, ಧರ್ಮ ಮತ್ತು ರಾಜಕೀಯ, ಧರ್ಮವೆಂಬ ಉದ್ಯಮ ಹೀಗೆ ಹತ್ತು ಹಲವು ಆಯಾಮಗಳ ಕುರಿತು ಚರ್ಚಿಸುತ್ತೇವೆ. ಆದರೆ ಧರ್ಮ ಮತ್ತು space ಎಂಬ ವಿಷಯ ಚರ್ಚೆಯಾಗಿಲ್ಲ. ಎಲ್ಲಾ ಧರ್ಮಗಳು ತನ್ನ ಸಾಂಸ್ಕೃತಿಕ ಆಚರಣೆಗಳ ಮೂಲಕ ಜನ ಒಟ್ಟುಗೂಡಲು ಒಂದು space ಸೃಷ್ಟಿ ಮಾಡಿಕೊಡುತ್ತದೆ. ಮಾನವ ಮೂಲಭೂತವಾಗಿ ಸೋಶಿಯಲ್ ಬೀಯಿಂಗ್ ಆಗಿರುವುದರಿಂದ, ಸಮುದಾಯದಲ್ಲಿರುವಾಗ ನಾನು ಸುರಕ್ಷಿತವಾಗಿದ್ದೇನೆ ಎಂಬ ಭಾವಕ್ಕೆ ಬೆಲೆಕಟ್ಟಲಾಗದು. It is there in the evolutionary process of humans. ಈ ಸ್ಪೇಸ್ ಸಾಮಾನ್ಯವಾಗಿ ದೇವಾಲಯ, ದೇವಾಲಯ ಆಚರಿಸುವ ಮಹೋತ್ಸವಗಳು, ಜಾತ್ರೆಗಳಿಗೆ ಬೆಸೆದುಕೊಂಡಿರುತ್ತದೆ. ಅದಕ್ಕೆ ಅಲ್ಲವೇ ಧರ್ಮದ ಎಲ್ಲಾ ಸಮುದಾಯಗಳು (ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನೂ ಸೇರಿಸಿ) ತಮ್ಮದೊಂದು ದೇವಾಲಯ ಕಟ್ಟಕೊಳ್ಳಬೇಕು ಎಂಬ ಅಸೆಯೊಂದಿರುತ್ತವೆ.

ಇತ್ತೀಚಿನ ದಿನಗಳಲ್ಲಿ ಬಲಪಂಥೀಯರು ಕೆಳ ಜಾತಿಯವರಿಗೆ ಇಂತಹ ಸ್ಪೇಸ್ಗಳನ್ನ ಸೃಷ್ಟಿಸಿಕೊಡುವುದರಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. (ಬದ್ರಿ ನಾರಾಯಣ್ ಬರೆದ ರಿಪಬ್ಲಿಕ್ ಆಫ್ ಹಿಂದುತ್ವ ಎಂಬ ಪುಸ್ತಕ ಓದಿ) ಬಲಪಂಥೀಯರು ರಾಮ ಮಂದಿರ ಬಗ್ಗೆ ಹೇಗೆ ಸಿಡಿದೆದ್ದು ಹೋರಾಟ ಮಾಡುತ್ತಾರೋ ಹಾಗೆ ಹಳ್ಳಿಯ ಲೋಕಲ್ ದೇವತೆಗಳ ದೇವಾಲಯಗಳಿಗೋಸ್ಕರವೂ ಹೋರಾಟ ಮಾಡುತ್ತಾರೆ. ವಿಚಾರವಾದಿಗಳು ಮಂದಿರ, ಮೂಢನಂಬಿಕೆ, ಆಚರಣೆಗಳ ಮೂದಲಿಸುವ ಭರದಲ್ಲಿ ತಮ್ಮ support base ಕಳೆದುಕೊಳ್ಳುತ್ತಿದ್ದಾರೆ. ದೇವಾಲಯಗಳು ಬರಿಯ ಮೌಢ್ಯ ಹರಡುವ ಕೇಂದ್ರಗಳು, ಆಚರಣೆಗಳು ಅರ್ಥವಿಲ್ಲದವು, ಅವಗಳನ್ನ ಸಂಪೂರ್ಣ ಕಡೆಗಣಿಸಿ ರಾಷನಲ್ ಆಗಿಬಿಡಬೇಕೆಂದು ವಾದಿಸುವ ವಿಚಾರವಾದಿಗಳು appropriation ಮತ್ತು ಟೆಂಪಲ್ as a space of coming together ಅನ್ನುವ ದಿಕ್ಕಿನಲ್ಲಿ ನಾವೆಲ್ಲಾ ಆಲೋಚಿಸುವ ಕಾಲ ಇದಾಗಿದೆ.

(ಇಲ್ಲಿನ ಸಾಕಷ್ಟು ಉದಾಹರಣೆ, ಮಾಹಿತಿಯನ್ನ ದಾಬೋಲ್ಕರ್ ಅವರ ಬರಹದಿಂದ ತೆಗೆದುಕೊಂಡಿದ್ದೇನೆ. ಅವರ ಬರಹಗಳು ಮರಾಠಿಯಿಂದ ಇಂಗ್ಲೀಷ್ಗೆ ಅನುವಾದ ಆಗಿರೋದು ಕಡಿಮೆ. ಮರಾಠಿ ತಿಳಿದಿರುವವರು ಅವರ ಬರಹಗಳನ್ನ ಓದಿ ಕನ್ನಡಕ್ಕೆ ಅನುವಾದ ಮಾಡುವ ತುರ್ತು ಈಗಿದೆ)

  • *ಹರೀಶ್ ಗಂಗಾಧರ್