ಚಿತ್ರದುರ್ಗ : ಸಮಾಜದಲ್ಲಿ ಆರ್ಥಿಕವಾಗಿ ಸಬಲರಾದವರು ಸಮಾಜದ ಬೆಳವಣಿಗೆಗೆ ಸಹಾಯ ಮಾಡಬೇಕಿದೆ ಎಂದು ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರು ಮಾಜಿ ಶಾಸಕರಾದ ಎಂ.ಬಿ.ತಿಪ್ಪೇರುದ್ರಪ್ಪ ಕರೆ ನೀಡಿದರು. ಚಿತ್ರದುರ್ಗ ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಕುಂಚಿಗ ವೀರಶೈವ ಲಿಂಗಾಯತ ಸಮಾಜ ಮತ್ತು ಉತ್ಥಾನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಸಮಾಜದ ಎಸ್.ಎಸ್.ಎಲ್.ಸಿ. ಮತ್ತು ದ್ವೀತೀಯ ಪಿಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಮಾಜ ಈಗ ಕಷ್ಟದ ಕಾಲದಲ್ಲಿದೆ ಈ ಸಮಯದಲ್ಲಿ ಸಮಾಜ ಭಾಂಧವರು ನೆರವಿಗೆ ಬರಬೇಕಿದೆ, ಸಮಾಜದಲ್ಲಿ ಇದ್ದವರು ಸಹಾಯವನ್ನು ಮಾಡುವ ಮನೋಭಾವವನ್ನು ತೋರಬೇಕಿದೆ. ತಮ್ಮ ದುಡಿಮೆಯಲ್ಲಿ ಇಂತಿಷ್ಟು ಭಾಗವನ್ನು ದಾನ ಮಾಡುವ ಮನೋಭಾವವನ್ನು ಬೆಳಿಸಿಕೊಳ್ಳಿ, ಸತ್ತಾಗ ಯಾರೂ ಸಹಾ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಇದ್ದಾಗ ಬೇರೆಯವರಿಗೆ ಸಹಾಯ, ಸಹಕಾರವನ್ನು ಮಾಡುವ ಕಾರ್ಯವನ್ನು ಮಾಡುವಂತೆ ಮನವಿ ಮಾಡಿದರು. ನಮ್ಮಲ್ಲಿ ಸಹಾಯ ಮಾಡುವುದಕ್ಕಿಂತ ಅಸೂಯೇ ಪಡುವವರ ಸಂಖ್ಯೆ ಹೆಚ್ಚಾಗಿದೆ ಇದರಿಂದ ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲ, ನಮ್ಮಲ್ಲಿ ಅಧಿಕಾರ, ಅಂತಸ್ತು ಇದ್ದಾಗ ದಾನ ಮಾಡುವ ಕಾರ್ಯವನ್ನು ಮಾಡಬೇಕಿದೆ. ನಮ್ಮ ಸಮಾಜದ ಕಟ್ಟಡ ನಿರ್ಮಾಣಕ್ಕೆ ನಾನು ಸಹಾಯ ಮಾಡಿದ್ದೇನೆ ಇನ್ನೂ ಸಹಾ ಸಹಾಯವನ್ನು ಮಾಡುತ್ತೇನೆ ಎಂದರೆ ಯಾರು ಸಹಾ ಬರುವುದಿಲ್ಲ ಎಂದು ವಿಷಾಧಿಸಿ ನಮ್ಮ ಸಮಾಜದಲ್ಲಿ ದಾನ ಮಾಡುವ ಮನಸ್ಸುಗಳು ಹೆಚ್ಚಾಗಬೇಕಿದೆ ಆಗ ಮಾತ್ರ ಸಮಾಜದ ಪ್ರಗತಿ ಸಾಧ್ಯವಿದೆ ಎಂದು ತಿಪ್ಪೇರುದ್ರಪ್ಪ ತಿಳಿಸಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರಾದ ಉಜ್ಜನಪ್ಪ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಅರಳಲು ಇಂತಹ ಕಾರ್ಯಕ್ರಮಗಳು ಅನಿವಾರ್ಯವಾಗಿದೆ. ಇಂದಿನ ದಿನಮಾನದಲ್ಲಿ ನಮ್ಮ ಜನತೆ ಕೆಲಸಕ್ಕಿಂತ ಹೆಚ್ಚಾಗಿ ಟಿವಿಯಲ್ಲಿ ಬರುವಂತ ಧಾರವಾಹಿಗಳನ್ನು ನೋಡಲು ಕಾಲವನ್ನು ಹರಣ ಮಾಡುತ್ತಾರೆ. ಇದರಿಂದ ಎನು ಪ್ರಯೋಜನ ಇಲ್ಲ ಎಂದು ಗೊತ್ತಿದ್ದರು ಸಹಾ ರಾತ್ರಿ 11.30ರವರೆಗೂ ಟಿವಿಯನ್ನು ನೋಡುತ್ತಾರೆ. ಆದರೆ ವಿದೇಶದಲ್ಲಿ ನಮ್ಮ ಕೆಲಸವನ್ನು ಮಾಡುವುದನ್ನು ಬಿಟ್ಟರೆ ಟಿವಿಯನ್ನು ನೋಡುವುದಿಲ್ಲ ನೋಡಿದರು ಸಹಾ ವಾರ್ತೆಗಳನ್ನು ಮಾತ್ರ ನೋಡುತ್ತಾರೆ ಎಂದರು. ನಮ್ಮಲ್ಲಿ ಗ್ರಂಥಾಲಯಗಳು ಹೆಚ್ಚಾಗಿದ್ದರೂ ಸಹಾ ಅದರ ಬಳಕೆ ಮಾತ್ರ ಕಡಿಮೆ ಇದೆ. ಇದು ಹೆಚ್ಚಾದಷ್ಟು ನಮ್ಮ ವಿದ್ಯಾವಂತ ಸಂಖ್ಯೆ ಹೆಚ್ಚಾಗುತ್ತದೆ. ನಮ್ಮಲ್ಲಿ ದೇಹದ ಪ್ರತಿಯೊಂದು ಅಂಗಗಳಿಗೂ ಸಹಾ ವೈದ್ಯರಿದ್ದಾರೆ, ಸಾಕಷ್ಟು ಪ್ರಮಾಣದಲ್ಲಿ ಇಂಜಿನಿಯರ್ ಗಳಿದ್ದಾರೆ. ಮಾಹಿತಿನ ತಂತ್ರಜ್ಞಾನದಲ್ಲಿ ಸಾಕಷ್ಟು ಹೆಸರು ಮಾಡಿದವರಿದ್ದಾರೆ ಆದರೂ ಸಹಾ ಇವುಗಳು ಬೇಡಿಕೆ ಕಡಿಮೆಯಾಗಿಲ್ಲ, ಈಗ ಪ್ರತಿಭಾ ಪುರಸ್ಕಾರಕ್ಕೆ ಒಳಗಾದ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ಸಾಧ್ಯವಾದಷ್ಟು ಉತ್ತಮವಾಗಿಸಿಕೊಳ್ಳಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಕೃಷ್ಣಮೂರ್ತಿ, ಬಸವರಾಜಪ್ಪ, ಕುಬೇರಪ್ಪ ಮತ್ತು ರಾಜಶೇಖರಪ್ಪ ಭಾಗವಹಿಸಿದ್ದರು. ಭಾವನಾ ಪ್ರಾರ್ಥಿಸಿದರೆ, ಹರೀಶ್ ಸ್ವಾಗತಿಸಿದರು. ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುನ 32 ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಒಳಗಾದರು.