ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರಿನಲ್ಲಿ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಒಟ್ಟು 1500 ಅರ್ಜಿಗಳು ಬಂದಿದ್ದವು. ಅದರಲ್ಲಿ 1113 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ. ಉಳಿದವುಗಳನ್ನು ಶೀಘ್ರ ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಕುಂದೂರಿನಲ್ಲಿ ವಾಸ್ತವ್ಯ ಮಾಡಿದ್ದ ಸಚಿವರು ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಕುಂದೂರು ಗ್ರಾಮಕ್ಕೆ ಸ್ಮಶಾನದ ಅವಶ್ಯಕತೆ ಬಗ್ಗೆ ಅರ್ಜಿಗಳು ಬಂದಿವೆ. ಸ್ಮಶಾನ ನಿರ್ಮಾಣ ಮಾಡಿ ಕೊಡಲು ನಾನು ಬದ್ಧನಿದ್ದೇನೆ. ಆದರೆ ಇಲ್ಲಿ ನೀರಾವರಿ ಪ್ರದೇಶ ಆಗಿರುವುದರಿಂದ ಭೂಮಿ ನೀಡಲು ಯಾರೂ ಮುಂದೆ ಬರುತ್ತಿಲ್ಲ ಎಂಬ ವಿಚಾರ ಗೊತ್ತಾಯಿತು. ಗ್ರಾಮಸ್ಥರು ಚರ್ಚೆ ನಡೆಸಿ, ದೊಡ್ಡ ಮನಸ್ಸು ಮಾಡಿ ಜಮೀನು ಒದಗಿಸಬೇಕು. ಯಾರೂ ದಾನವಾಗಿ ಭೂಮಿ ನೀಡುವುದು ಬೇಡ. ಜಮೀನಿನ ವೆಚ್ಚ ನೀಡಲಾಗುವುದು ಎಂದು ತಿಳಿಸಿದರು.
‘ಕುಂದೂರು ಗ್ರಾಮದ ಭೂಮಿರಹಿತ ರೈತರು ಬಗರ್ ಹುಕುಂ ಸಾಗುವಳಿ ಜಮೀನಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನನಗೆ ಬಂದಿರುವ ಅಹವಾಲುಗಳಲ್ಲಿ ಇಂಥವೇ ಹೆಚ್ಚಿನ ಸಂಖ್ಯೆಯಲ್ಲಿವೆ. ಆದ್ದರಿಂದ, ಬಗರ್ ಹುಕುಂ ಸಾಗುವಳಿ ಸಮಿತಿ ಶೀಘ್ರವೇ ಸಭೆ ನಡೆಸಿ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಸರ್ಕಾರದ ನಿಯಮಾವಳಿಗಳಿಗನುಗುಣವಾಗಿ ಜಮೀನು ಮಂಜೂರು ಮಾಡಬೇಕು’ ಎಂದು ಸೂಚಿಸಿದರು.
ಅಧಿಕಾರಿಗಳು-ಜನರ ಮಧ್ಯೆ ಕಳೆದ ಐವತ್ತು ವರ್ಷಗಳಿಂದಲೂ ದೊಡ್ಡ ಕಂದಕ ನಿರ್ಮಾಣವಾಗಿತ್ತು. ಜನರು-ಅಧಿಕಾರಿಗಳನ್ನು ಬೆಸೆಯುವ ಮೂಲಕ ಆ ಕಂದಕವನ್ನು ನಿವಾರಿಸಲು ಮುಂದಾಗಿದ್ದೇನೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಸಮರ್ಪಕ ಅನುಷ್ಠಾನದಿಂದ ಇದು ಸಾಧ್ಯ ಎಂದರು.
‘ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದವರು ಏಕವ್ಯಕ್ತಿ ಪ್ರದರ್ಶನ ಮಾಡಿದ್ದರು. ಗ್ರಾಮಕ್ಕೆ ತಡರಾತ್ರಿ ಬಂದು, ಬೆಳಿಗ್ಗೆ ಹೋಟೆಲ್ನಿಂದ ಉಪಾಹಾರ ತರಿಸಿಕೊಂಡು ಸೇವಿಸಿ, ಏನೂ ಕೆಲಸ ಮಾಡದೇ ಹೋಗುತ್ತಿದ್ದರು. ಆದರೆ, ನಮ್ಮದು ಹಾಗಲ್ಲ, ಚಾಪೆ ಮೇಲೆ ಮಲಗಿದ್ದೆ. ಬೆಳಿಗ್ಗೆ ಪರಿಶಿಷ್ಟ ಜಾತಿ ಸಮುದಾಯದವರ ಮನೆಗೆ ಹೋಗಿ ಉಪಾಹಾರ ಸೇವಿಸಿದ್ದೇನೆ’ ಎಂದು ಹೇಳಿದರು.
ಜಡ್ಡುಗಟ್ಟಿದ ಆಡಳಿತಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಕಂದಾಯ ಸಚಿವ ಆರ್. ಅಶೋಕ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸುತ್ತಿದ್ದಾರೆ.ಜನರ ಸಮಸ್ಯೆಗಳು ಶೀಘ್ರದಲ್ಲಿ ಬಗೆಹರಿಯಲು ಇದು ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
‘ಕುಂದೂರು ಗ್ರಾಮದ ಭೋವಿ, ಪರಿಶಿಷ್ಟ ಜಾತಿ, ಪದ್ಮಶಾಲಿ, ಲಿಂಗಾಯತ ಸೇರಿ ಎಲ್ಲರ ಮನೆಗಳಿಗೂ ತೆರಳಿ ಜನರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ನಿಮ್ಮ ಯಾವುದೇ ಸಮಸ್ಯೆಗಳಿಗೂ ನಾನು ಸ್ಪಂದಿಸುತ್ತೇನೆ ನನ್ನ ಮೇಲೆ ನಂಬಿಕೆ ಇಡಿ’ ಎಂದು ಮನವಿ ಮಾಡಿದರು.
ಶಾಂತರಾಜ್-ಶಾರದಮ್ಮ ಮನೆಯಲ್ಲಿ ಉಪಾಹಾರ: ಕುಂದೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಚಿವ ಆರ್. ಅಶೋಕ ಅವರು ಭಾನುವಾರ ಬೆಳಿಗ್ಗೆ ವಾಯುವಿಹಾರ ಮುಗಿಸಿ, ಪತ್ರಿಕೆಗಳನ್ನು ತಿರುವು ಹಾಕಿದ ಬಳಿಕ ಅಂಬೇಡ್ಕರ್ ಕಾಲೊನಿಗೆ ಭೇಟಿ ನೀಡಿದರು. ಬಳಿಕ ಆಂಜನೇಯ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದರು.
ದೇವಸ್ಥಾನದ ಮುಂಭಾಗದ ಅಶ್ವತ್ಥ ಕಟ್ಟೆಯಲ್ಲಿ ಕುಳಿತ್ತಿದ್ದ ಸ್ಥಳೀಯರ ಜತೆಗೆ ಉಭಯಕುಶಲೋಪರಿ ಮಾತುಗಳನ್ನಾಡಿದರು. ಬಳಿಕ ಬಗರ್ ಹುಕುಂ ಸಮಿತಿ ಸದಸ್ಯಶಾಂತರಾಜ್-ಶಾರದಮ್ಮ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು.
ರಾಗಿ ತಾಲಿಪಟ್ಟು, ಕೆಂಪು, ಶೇಂಗಾ, ಕಾಯಿ ಚಟ್ನಿ, ತಟ್ಟೆ ಇಡ್ಲಿ, ಉಪ್ಪಿಟ್ಟು ಸೇವಿಸಿದರು. ಶಾಸಕ ಎಂ.ಪಿ. ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಸೀಲ್ದಾರ್ ಬಸನಗೌಡ ಕೋಟೂರ, ಅಧಿಕಾರಿಗಳು ಜತೆಗಿದ್ದರು.
‘ಮಧ್ಯಾಹ್ನದ ಊಟಕ್ಕೆ ಹೋಟೆಲ್ಗೆ ಹೋಗಲ್ಲ. ಇದನ್ನೇ ಕಟ್ಟಿಕೊಡಿ’ ಎಂದು ಅದೇ ತಿನಿಸುಗಳನ್ನು ಸಚಿವರು ಕಟ್ಟಿಸಿಕೊಂಡು ಹೋದರು.
ಹೆತ್ತವರನ್ನು ಕಳೆದುಕೊಂಡ ಸಹೋದರಿಯರ ಶಾಲಾ ಜವಾಬ್ದಾರಿ ಹೊತ್ತ ಸಚಿವ: ಹೆತ್ತವರನ್ನು ಕಳೆದುಕೊಂಡು ಮಾವನ ಆಶ್ರಯದಲ್ಲಿ ಇರುವ ಇಬ್ಬರು ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸಚಿವ ಆರ್. ಅಶೋಕ ವಹಿಸಿಕೊಂಡರು. ಎಸ್ಸೆಸ್ಸೆಲ್ಸಿ ವರೆಗಿನ ಶುಲ್ಕ ಪಾವತಿಸುವುದಾಗಿ ಘೋಷಿಸಿದರು.
ಮಲ್ಲಿಕಾ ಹಾಗೂ ನಯನಾ ಎಂಬ ಸಹೋದರಿಯರು ಹಿರೇಕೆರೂರು ತಾಲ್ಲೂಕು ರಟ್ಟಿಹಳ್ಳಿ ಶಾಲೆಯಲ್ಲಿ ಓದುತ್ತಿದ್ದಾರೆ.