ಬೆಳಗಾವಿ: ಮರಾಠಾ ಮೀಸಲಾತಿಗೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ಕೈಗೊಂಡ ಅನಿರ್ದಿಷ್ಟಾವಧಿ ಹೋರಾಟ ಶುಕ್ರವಾರ ಹಿಂಸಾಚಾರ ರೂಪಕ್ಕೆ ತಿರುಗಿದ್ದು, ಆರು ಬಸ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಲ್ಲಿ ಕರ್ನಾಟಕದ ಎರಡು ಬಸ್ಸುಗಳೂ ಸುಟ್ಟಿವೆ. 85ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ವಿವಿಧೆಡೆ ಕೆಲವು ದಿನಗಳಿಂದ ಮರಾಠಾ ಮೀಸಲಾತಿಗಾಗಿ ಪ್ರತಿಭಟನೆಗಳು ನಡೆದಿವೆ. ಜಾಲನಾ ಜಿಲ್ಲೆಯ ಶಹಘಡ ಬಳಿ ನಡೆದ ಹೋರಾಟದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಹೋರಾಟಗಾರರು ಧುಳೆ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾದರು. ಇದನ್ನು ತಡೆಯಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಕೋಪಗೊಂಡ ಹೋರಾಟಗಾರರು ಹೆದ್ದಾರಿಯಲ್ಲಿ ಸಿಕ್ಕಸಿಕ್ಕ ಬಸ್ಸುಗಳಿಗೆ ಕಲ್ಲು ತೂರಿದರು. ಪ್ರಯಾಣಿಕರು ಬಸ್ಸಿನಲ್ಲಿ ಇದ್ದಾಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ನೋಡ ನೋಡುತ್ತಿದ್ದಂತೆ ಆರು ಬಸ್ಸುಗಳು ಧಗಧಗ ಉರಿದವು ಎಂದು ಅಲ್ಲಿನ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಔರಾಂಗಾಬಾದ್‌ನಿಂದ ಹುಬಬಳ್ಳಿಗೆ ಬರುತ್ತಿದ್ದ ಬಸ್‌ನಲ್ಲಿ 45 ಪ್ರಯಾಣಿಕರು ಇದ್ದರು. ಈ ಬಸ್ಸಿಗೂ ಬೆಂಕಿ ಹಚ್ಚಲಾಗಿದೆ ಎಂದು ಚಾಲಕ, ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ ಎಲ್.ಎಲ್. ಲಮಾಣಿ ತಿಳಿಸಿದ್ದಾರೆ. ಘಟನೆಯಿಂದ ಮಹಾರಾಷ್ಟ್ರರ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಶುಕ್ರವಾರ ಸಂಜೆ ನಡೆದ ಹಿಂಸಾಚಾರದಲ್ಲಿ ಉರಿದುಹೋದ ಕರ್ನಾಟಕದ ಬಸ್ಸುಗಳು.