ಆ ನೆನಪಿನ್ನು ಹಸಿ ಹಸಿ
ಒಮ್ಮೆ ಅಣ್ಣನ ತೊಡೆಯ
ಮೇಲೆ ಕೂತು ಈ ಪ್ರೆಶ್ನೆ ಕೇಳಿದ್ದೆ
“ಅಣ್ಣ, ಸಾಯುವುದೆಂದರೇನು?”
ಕಸಿವಿಸಿಗೊಂಡ ಅಣ್ಣ ಕ್ಷಣಕಾಲ ಯೋಚಿಸಿದ್ದರು
ಇಂತಹ ಜಟಿಲ ಪ್ರೆಶ್ನೆಗೆ ಸರಳವಾಗಿ ಉತ್ತರಿಸುವುದಾದರು ಹೇಗೆ?
ಮುಗ್ದ ಮೂರ್ಖ ಮಗನಿಗೆ
ತತ್ವ ಥಿಯರಿಗಳು ಅರ್ಥವಾಗದು.
ಸರಳವಾಗಿ ಅವರೆಂದರು
“ಸಾಯುವುದೆಂದರೆ ಬಿಗಿ ಮುಷ್ಟಿಯನು
ಸಡಿಲ ಬಿಡುವುದು.
ತೆರೆದ ಖಾಲಿ ಹಸ್ತದಿ
ನಿರಾಳವಾಗಿ ಹಗುರಾಗಿ
ಮಲಗಿಬಿಡುವುದು”
ಅಂದು ಅರ್ಥವಾಗದಿದ್ದರು
ಅರ್ಥವಾದಂತೆ ನಟಿಸಿ
ತಲೆಯಲ್ಲಾಡಿಸಿ ಅವರು ಮೃದು
ತೊಡೆಯಿಂದ ಚಂಗನೆ ಜಿಗಿದು
ಗೋಲಿಯಾಡಲು ಹೋಗಿದ್ದೆ
ಮೂವತ್ತು ವರುಷಗಳ ನಂತರ
ಆ ಉತ್ತರದರ್ಥದ ಅನುಭವ ನನಗಾಯಿತು
ಅಣ್ಣ ತಮ್ಮ ಬಿಗಿ ಮುಷ್ಠಿಯ
ಸಡಿಲಿಸಿ ನಿರಾಳವಾಗಿ ಹಗುರಾಗಿ
ಮಲಗಿಬಿಟ್ಟಿದ್ದರು.
ಅವರ ಉತ್ತರದಲಿ
ಇಡಿಯ ಮನುಕುಲದ
ಇತಿಹಾಸವೇ ಅಡಗಿತ್ತು
ಕೆಲವರು ಬಿಗಿ ಮುಷ್ಠಿಯಲಿ
ಕತ್ತಿ ಈಟಿಗಳನಿಡಿದು ತಿವಿದು ಆಳಿದ್ದು
ಕ್ಷುಲ್ಲಕ ಕಾರಣಗಳಿಗೆ ಗುದ್ದಾಡಿದ್ದು
ಹಲವರು ಮುಷ್ಠಿ ಬಿಗಿಯಿಡಿದು
ಹಲ್ಲು ಕಚ್ಚಿ ದಬ್ಬಾಳಿಕೆಯ ಸಹಿಸಿದ್ದು
ಇಷ್ಟೆಯಲ್ಲವೆ ನಮ್ಮ ನಿಮ್ಮೆಲ್ಲರ ಇತಿಹಾಸ!
ಇಂದು ಟ್ರೈನಿನಲ್ಲಿ ಪಯಣಿಸುವಾಗ
ಮನೆಯಲಿ ಓದಲು ಕುಳಿತಾಗ
ಗೆಳೆಯರ ಜೊತೆ ಹರಟೆಗೆ ನಿಂತಾಗ
ನನ್ನ ಮಕ್ಕಳು ಆಡುವುದ ನೋಡುವಾಗ
ಸಡಿಲಗೊಂಡ ಹಸ್ತವನು
ಗಟ್ಟಿಯಾಗಿ ಮುಷ್ಠಿ ಮಾಡುತ್ತಲೇ ಇರುತ್ತೇನೆ…
ಬದುಕಿದ್ದೇನೆಂಬ ಖಾತ್ರಿಗೆ…
ಹರೀಶ್ ಗಂಗಾಧರ್.