Saturday, December 14, 2024
Homeಬೆಂಗಳೂರು ವಿಭಾಗಬೆಂಗಳೂರು ನಗರಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ ಕೆಪಿಸಿಸಿ ಪ್ರಚಾರ ಸಮಿತಿ

ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ ಕೆಪಿಸಿಸಿ ಪ್ರಚಾರ ಸಮಿತಿ

ದೇಶ ಕಟ್ಟಿದ್ದು ಕಾಂಗ್ರೆಸ್ ಪಕ್ಷ, ಮೋದಿ ಅಲ್ಲ: ಎಂ ಬಿ ಪಾಟೀಲ

ಬೆಂಗಳೂರು: ಕಳೆದ 75 ವರ್ಷಗಳಲ್ಲಿ ಭಾರತವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಒಂಬತ್ತು ವರ್ಷಗಳಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗುರುವ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭಾರೀ ಗೆಲುವಿಗೆ ಶ್ರಮಿಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಕ್ಷದ ಪ್ರಚಾರ ಸಮಿತಿಗಳ ಪದಾಧಿಕಾರಿಗಳಿಗೆ ಭಾನುವಾರ ಪಕ್ಷದ ವತಿಯಿಂದ ಇಲ್ಲಿನ ಭಾರತ್ ಜೋಡೊ‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಮುಂಬರುವ ಲೋಕಸಭಾ ಚುನಾವಣಾ ಪೂರ್ವ ತಯಾರಿ‌ ಸಭೆಯಲ್ಲಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಉದಾತ್ತ ಇತಿಹಾಸ ಕಾಂಗ್ರೆಸ್ಗಿದೆ. ಇದಾದ ಮೇಲೆ ದೇಶದ ಚುಕ್ಕಾಣಿ ಹಿಡಿದ ಜವಾಹರ್ ಲಾಲ್ ನೆಹರು ಸೇರಿದಂತೆ ಅನೇಕರು ಅರ್ಥಪೂರ್ಣ ಕೆಲಸಗಳನ್ನು ಮಾಡುವ ಮೂಲಕ ಭಾರತವನ್ನು ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಸಿದರು. ಇದನ್ನು ಮೋದಿ ಸೇರಿದಂತೆ ಬಿಜೆಪಿ ನಾಯಕರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ದೇಶದಲ್ಲಿರುವ ಅಣೆಕಟ್ಟುಗಳಲ್ಲಿ ಶೇಕಡ 95 ರಷ್ಟು ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ. ಹಾಗೆಯೇ ಐಐಎಂ, ಐಐಟಿ, ಏಮ್ಸ್, ಕ್ಷೀರಕ್ರಾಂತಿ, ಕೃಷಿ ಕ್ರಾಂತಿ, ಡಿಜಿಟಲ್ ಕ್ರಾಂತಿ ಇವೆಲಲವನ್ನು ಮಾಡಿದ್ದು ನಮ್ಮ ಪಕ್ಷವೇ ಹೊರತು ಕೋಮುವಾದಿ ರಾಜಕಾರಣ ಮಾಡುತ್ತಿರುವ ಮೋದಿಯಲ್ಲ. ಅವರೇನಿದ್ದರೂ ಚೆನ್ನಾಗಿ ಭಾಷಣ ಮಾಡಬಲ್ಲರು ಅಷ್ಟೇ ಎಂದು ಅವರು ವ್ಯಂಗ್ಯವಾಡಿದರು.

ದೇಶದಲ್ಲಿ ಬಡವರ ಸಬಲೀಕರಣ ಆಗಬೇಕೆಂಬ ಕನಸಿನೊಂದಿಗೆ ಆಹಾರ ಭದ್ರತೆ ಮತ್ತು ಕಡ್ಡಾಯ ಶಿಕ್ಷಣದ ಕಾಯ್ದೆಗಳನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ಸಿನದೇ ಆಗಿದೆ. ಜೊತೆಗೆ ದೇಶದ ಆರ್ಥಿಕ ಉದಾರಿಕರಣವನ್ನು ಸಾಧಿಸಿದ ಶ್ರೇಯಸ್ಸು ಪಿ ವಿ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಕೇವಲ 100 ದಿನಗಳಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಇರುವ ಕಪ್ಪು ಹಣವನ್ನೆಲ್ಲ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಮೋದಿ ಹೇಳಿದ್ದು ಈಗ ಅವರಿಗೇ ಮರೆತು ಹೋಗಿರಬೇಕು ಎಂದು ಅವರು ಟೀಕಿಸಿದರು.

ಬುದ್ಧ, ಬಸವಣ್ಣ ಅಂಬೇಡ್ಕರ್, ನಾರಾಯಣ ಗುರುಗಳು ಮತ್ತು ಕುವೆಂಪು ಅವರ ಸಿದ್ಧಾಂತಗಳೇ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಾಗಿವೆ. ನಮ್ಮ ಸಾಧನೆ ಮತ್ತು ಮೋದಿಯವರ ವೈಫಲ್ಯಗಳನ್ನು ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಸಂಕ್ಷಿಪ್ತವಾಗಿ ವಿವರಿಸುವ ಕರಪತ್ರಗಳನ್ನು ಸದ್ಯದಲ್ಲಿಯೇ ಹೊರತರಲಾಗುವುದು ಎಂದು ಅವರು ತಿಳಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಸದ್ಯಕ್ಕೆ ಹೊಂದಿರುವ ಕಾರ್ಯ ಚಟುವಟಿಕೆ ಸಮಾಧಾನಕರವಾಗಿಲ್ಲ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಿ ಸಕ್ರಿಯಗೊಳಿಸಲಾಗುವುದು. ಈ ಸಂಬಂಧ ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರುಗಳ ಜೊತೆ ಚರ್ಚಿಸಲಾಗುವುದು ಎಂದು ಪಾಟೀಲ ಮಾಹಿತಿ ನೀಡಿದರು.

ರಾಜ್ಯ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಕೇವಲ ಮೂರು ತಿಂಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಬಾಕಿ ಇರುವ ಯುವ ನಿಧಿ ಗ್ಯಾರಂಟಿ ಕೂಡ ಒಂದೆರಡು ತಿಂಗಳಲ್ಲಿ ಜಾರಿಯಾಗಲಿದೆ. ಇದನ್ನು ಪದಾಧಿಕಾರಿಗಳು ಪ್ರತಿಯೊಬ್ಬರ ಮನೆ ಬಾಗಿಲಿಗೂ ತಲುಪಿಸಬೇಕು ಇವುಗಳ ಬಲದ ಮೇಲೆ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠಪಕ್ಷ ರಾಜ್ಯದ 20 ಕ್ಷೇತ್ರಗಳನ್ನು ಗೆಲ್ಲಬೇಕು. ಇಲ್ಲದೇ ಹೋದರೆ ನಮ್ಮ ಗ್ಯಾರಂಟಿಗಳಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಅವರು ಕರೆ ನೀಡಿದರು.

ಮೋದಿಯವರು ಹೋದಲ್ಲೆಲ್ಲ ಭಾರತದ ಪ್ರತಿಯೊಂದು ಸಾಧನೆಗೂ ತಾವೇ ಕಾರಣ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ ಇದನ್ನು ನಾವು ಸಮರ್ಥವಾಗಿ ಎದುರಿಸಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಬಿ.ಎಲ್. ಶಂಕರ್, ವಿಧಾನ ಪರಿಷತ್ತಿನ ಸದಸ್ಯರಯಗಳಾದ ಮಂಜುನಾಥ ಭಂಡಾರಿ, ಯು.ಬಿ.ವೆಂಕಟೇಶ, ಸುಧಾಮದಾಸ್, ಶ್ರೀ ಪ್ರಕಾಶ ರಾಥೋಡ್ ಮಾಜಿ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ, ಮಾಜಿ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ವಕ್ತಾರರಾದ ಶ್ರೀ ರಮೇಶ್ ಬಾಬು, ಸಮನ್ವಯಕಾರರಾದ ಶ್ರೀ ಎ.ಪಿ. ಬಸವರಾಜು, ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.