Saturday, December 14, 2024
Homeರಾಜ್ಯಬೆಂಗಳೂರು ವಿಭಾಗಹೆಚ್‌.ಎನ್‌ ವ್ಯಾಲಿ ಮತ್ತು ಕೆ.ಸಿ ವ್ಯಾಲಿ ಸಂಸ್ಕರಿಸಿದ ನೀರಿನ ಬಗ್ಗೆ ಯಾವುದೇ ಅನುಮಾನ ಬೇಡ: ಸಚಿವ...

ಹೆಚ್‌.ಎನ್‌ ವ್ಯಾಲಿ ಮತ್ತು ಕೆ.ಸಿ ವ್ಯಾಲಿ ಸಂಸ್ಕರಿಸಿದ ನೀರಿನ ಬಗ್ಗೆ ಯಾವುದೇ ಅನುಮಾನ ಬೇಡ: ಸಚಿವ ಎನ್‌ ಎಸ್‌ ಬೋಸರಾಜು

ಬೆಂಗಳೂರು: ಕೆ.ಸಿ ವ್ಯಾಲಿ ಮತ್ತು ಹೆಚ್‌.ಎನ್‌ ವ್ಯಾಲಿಯ ಸಂಸ್ಕರಿಸಿದ ನೀರಿನ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ. ಈ ನೀರಿನ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಅನುಮಾನ ಪಡುವ ಅಗತ್ಯವಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌ ಬೋಸರಾಜು ತಿಳಿಸಿದ್ದಾರೆ.

ಈ ಬಗ್ಗೆ ಇಂದು ವಿಕಾಸಸೌಧದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಕೆ.ಸಿ ವ್ಯಾಲಿ ಮತ್ತು ಹೆಚ್‌.ಎನ್‌ ವ್ಯಾಲಿ ಏತ ನೀರಾವರಿ ಯೋಜನೆಯ ಬಗ್ಗೆ ಹಾಗೂ ಅದರ ನೀರಿನ ಬಗ್ಗೆ ಈಗಾಗಲೇ ವ್ಯಾಪಕವಾದ ಸಂಶೋಧನೆಯನ್ನು ಕೈಗೊಳ್ಳಲಾಗಿದೆ. ಮಾನ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಪರಿಸರ ಆಘಾತೀಕರಣ ಮತ್ತು ಅಗ್ರಿಕಲ್ಚರ್‌ ಇಂಪ್ಯಾಕ್ಟ್‌ ಅಧ್ಯಯನ ಮಾಡುವ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳ ತಂಡವು ಮೇಲ್ವಿಚಾರಣೆ ಮಾಡುತ್ತಿದ್ದು IIT-Bombay, IIT-Kharagpur ಮತ್ತು CSIR-NEERI, New Delhi ಯ ವಿಜ್ಞಾನಿಗಳು/ತಜ್ಞರನ್ನೊಳಗೊಂಡ ರಾಷ್ಟ್ರೀಯ ಮಟ್ಟದ ವಿಷಯ ತಜ್ಞರ ಸಮಿತಿಯಿಂದಲೂ ಸಹ ಪರಿಶೀಲನೆಗೆ ಒಳಪಡಿಸಲಾಗುತ್ತಿರುತ್ತದೆ.

ಕೆ.ಸಿ ವ್ಯಾಲಿ ಯೋಜನೆಯನ್ನು ದಿನಾಂಕ. 02-06-2018 ರಂದು ಪ್ರಾಯೋಗಿಕವಾಗಿ ಚಾಲನೆ ಮಾಡಿ ಇದುವರೆಗೂ ಒಟ್ಟು 8.94 ಟಿಎಂಸಿ ಸಂಸ್ಕರಿಸಿದ ನೀರನ್ನು ಪಂಪ್‌ ಮಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 139 ಕೆರೆಗಳು ಮತ್ತು 133 ಚೆಕ್‌ ಡ್ಯಾಂ ಗಳನ್ನು ತುಂಬಿಸಲಾಗಿರುತ್ತದೆ. ಬೆಂಗಳೂರು ಜಲಮಂಡಳಿಯವರು ಸಂಸ್ಕರಿಸಿದ ತ್ಯಾಜ್ಯ ನೀರನ್ನ ಪ್ರತಿ ೧೦ ನಿಮಿಷಕ್ಕೊಮ್ಮೆ ಆನ್‌ಲೈನ್‌ ಮಾನಿಟರಿಂಗ್‌ ಸಿಸ್ಟಮ್‌ ಮೂಲಕ ಎಲ್ಲಾ ಪ್ಯಾರಮೀಟರ್‌ (ಎನ್‌ ಜಿ ಟಿ ಮತ್ತು ಸಿಪಿಸಿಬಿ ನಿಯಮಗಳು 2020 ಪ್ರಕಾರ) ಗಳನ್ನು ಪರಿಶೀಲಿಸಲಾಗುತ್ತದೆ.

ಪರಿಶೀಲಿತ ನೀರು ನಿಗದಿಪಡಿಸಿದ ಗಣಮಟ್ಟದ್ದಾಗಿದ್ದರೆ ಮಾತ್ರ ಸಂಸ್ಕರಿಸಿದ ನೀರನ್ನ ಕ್ಲೋರಿನೇಷನ್‌ ಕಾಂಟ್ಯಾಕ್ಟ್‌ ಟ್ಯಾಂಕ್‌ (ಸಿಸಿ ಟ್ಯಾಂಕ್‌) ಗೆ ಹರಿಸಲಾಗುತ್ತದೆ. ನಂತರ ಅದೇ ನೀರು ಸಣ್ಣ ನೀರಾವರಿ ಇಲಾಖೆ ನಿರ್ಮಿಸಿರುವ ಜ್ಯಾಕ್‌ ವೆಲ್‌ ಗೆ ಹರಿಯುತ್ತದೆ. ನಂತರ ಆ ನೀರನ್ನ ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ಎತ್ತುವಳಿ ಮಾಡಲಾಗುತ್ತದೆ. ಬೆಳ್ಳಂದೂರು ಜ್ಯಾಕ್‌ ವೆಲ್‌ ಹತ್ತಿರ ಸಣ್ಣ ನೀರಾವರಿ ಇಲಾಖೆಯಿಂದ ಎನ್‌ ಎ ಬಿ ಎಲ್‌ ಅನುಮೋದಿತ ಏಜೆನ್ಸಿಯ ಜೊತೆ ಕರಾರು ಮಾಡಿಕೊಂಡಿದ್ದು, ಪ್ರತಿನಿತ್ಯ 7 ಪ್ಯಾರಾಮೀಟರ್‌ಗಳನ್ನು ಪರಿಶೀಲಿಸಲಾಗುತ್ತದೆ, ವಾರಕ್ಕೊಮ್ಮೆ 14 ಪ್ಯಾರಾಮೀಟರ್‌ಗಳನ್ನು, ಪ್ರತಿತಿಂಗಳು 32 ಪ್ಯಾರಾಮೀಟರ್‌ ಗಳನ್ನು ಮತ್ತು ತ್ರೈಮಾಸಿಕಾಗಿ 42 ಪ್ಯಾರಾಮೀಟರಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರತಿ ನಿತ್ಯ 7 ಪ್ಯಾರಾಮೀಟರ್‌ಗಳನ್ನು ಪರಿಶೀಲಿಸಿ ಎನ್‌.ಜಿ.ಟಿ ನಿಗದಿಪಡಿಸಿದ ಮಾರ್ಗಸೂಚಿಗಳ ಪರಿಮಿತಿಯಲ್ಲಿರುವ ಗುಣಮಟ್ಟದ ನೀರನ್ನು ಮಾತ್ರ ಪಂಪ್‌ ಮಾಡಲಾಗುತ್ತಿದೆ. ಪರಿಶೀಲನೆಯಲ್ಲಿ ಯಾವುದೇ ಪ್ಯಾರಾಮೀಟರ್‌ ಏರು ಪೇರಾಗಿದ್ದಲ್ಲಿ ಆ ನೀರನ್ನ ಜ್ಯಾಕ್‌ ವೆಲ್‌ ಬೈಪಾಸ್‌ ಚಾನಲ್‌ ಮೂಲಕ ರಾಜಕಾಲುವೆಗೆ ಹರಿಸಲಾಗುತ್ತದೆ.

ಈ ಎರಡು ಯೋಜನೆಗಳ ಮೂಲಕ ಬಯಲು ಸೀಮೆಯಲ್ಲಿ ಅಂತರ್ಜಲ ಹೆಚ್ಚಳದ ಪ್ರಮುಖ ಗುರಿಯನ್ನು ಹೊಂದಿದ್ದು, ಇದರ ಪ್ರತಿಫಲ ಈಗಾಗಲೇ ಗೋಚರವಾಗುತ್ತಿದೆ. ಸಂಸ್ಕರಿಸಿದ ನೀರಿನ ಮೂಲಕ ಈ ಗುರಿಯನ್ನು ತಲುಪಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಕಾಲಕಾಲಕ್ಕೆ ಅಧ್ಯಯನ ಮಾಡಲಾಗುತ್ತಿದ್ದು ನೀರಿನ ಗುಣಮಟ್ಟವನ್ನು ಎನ್‌.ಜಿ.ಟಿ ಮಾರ್ಗಸೂಚಿಗಳ ಅನ್ವಯ ಕಾಪಾಡಲು ಇಲಾಖೆಯು ಎಚ್ಚರಿಕೆವಹಿಸುತ್ತಿದೆ ಹಾಗೂ ಪರಿಸರ ಮತ್ತು ಜೀವವೈವಿಧ್ಯಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಸಂಸ್ಕರಿಸಿದ ನೀರಿನಿಂದಾಗಿ ಯಾವುದೇ ಅಪಾಯಗಳು ಇರುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ.

ಆದಾಗ್ಯೂ, ನೀರಿನ ಗುಣಮಟ್ಟದಲ್ಲಿ ಯಾವುದೇ ಲೋಪಗಳಾಗದಂತೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಪ್ರಾಧಿಕಾರಗಳು ಮತ್ತು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.