Monday, May 19, 2025
Homeಕರಾವಳಿ ಕರ್ನಾಟಕದಕ್ಷಿಣ ಕನ್ನಡಭಾರಿ ಮಳೆಗೆ ಕುಸಿದ ಮನೆ

ಭಾರಿ ಮಳೆಗೆ ಕುಸಿದ ಮನೆ

ಮಂಗಳೂರು: ಕಳೆದ ಎರಡು ದಿನಗಳಲ್ಲಿ ಕರಾವಳಿಯಲ್ಲಿ ಧಾರಾಕಾ ಮಳೆಯಾಗಿದೆ. ನಾಲ್ಕು ಮನೆಗಳು ಪೂರ್ಣ, ಏಳು ಮನೆಗಳು ಭಾಗಶಃ ಹಾನಿಯಾಗಿವೆ. ವಿದ್ಯುತ್‌ ಕಂಬಗಳು ಮುರಿದು ಬಿದ್ದು ನಷ್ಟ ಸಂಭವಿಸಿದೆ. ಭತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರಾವಳಿ ಜಿಲ್ಲೆಗಳಲ್ಲಿ ಶನಿವಾರ ಸಂಜೆಯಿಂದ ಗುಡುಗು ಸಹಿತ ಮಳೆಯಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಾತ್ರಿ ಹೊತ್ತು ಸುರಿದ ಮಳೆ, ಗಾಳಿ ಸಿಡಿಲು, ಗುಡುಗಿಗೆ ಕೆಲವು ಕಡೆಗಳಲ್ಲಿ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ.

ನಗರ ಪ್ರದೇಶದಲ್ಲಿ ಶನಿವಾರ ರಾತ್ರಿಯ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿ ಸಮಸ್ಯೆಯಾಗಿತ್ತು. ಕೆಲವು ಭಾಗದಲ್ಲಿ ಮಳೆ ನೀರು ಭಾನುವಾರ ಬೆಳಗಿನವರೆಗೂ ಕಡಿಮೆಯಾಗಿರಲಿಲ್ಲ. ನೀರು ಮಾರ್ಗದ ಭಟ್ರ ಬೈಲಿನಲ್ಲಿ ಆವರಣ ಗೋಡೆಯ ಜತೆಗೆ ವಿದ್ಯುತ್‌ ಕಂಬ ಮುರಿದು ಬಿದ್ದು ಮನೆಗೆ ಹಾನಿಯಾಗಿದೆ. ಬಜಾಲ್‌ ಪ್ರದೇಶದಲ್ಲಿ ಮನೆಯೊಂದು ಪೂರ್ಣವಾಗಿ ಹಾನಿಯಾಗಿದ್ದು, ಅಲ್ಲಿನ ನಿವಾಸಿಗಳನ್ನು ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಲಾಗಿದೆ. ನೀರು ಮಾರ್ಗದ ವಂಟಾರ ಬೈಲಿನ ಕೃಷಿ ಭೂಮಿಗೆ ಮಳೆಯ ನೀರು ತೋಡಿನ ಮೂಲಕ ಹರಿದು ಬಂದು ಅಪಾರ ಹಾನಿಯಾಗಿದೆ. ಬಂಗ್ರ ಕೂಳೂರಿನಲ್ಲಿ ಮಳೆಗೆ ಮನೆಯೊಂದಕ್ಕೆ ಸಂಪೂರ್ಣ ಕುಸಿದಿದೆ.

ನಗರದ ಪಡೀಲ್‌ ಅಂಡರ್‌ ಪಾಸ್‌ನಲ್ಲಿ ನೀರು ತುಂಬಿದ್ದರಿಂದ ವಾಹನಗಳು ನಿಧಾನವಾಗಿ ಚಲಿಸಿದವು. ಕೊಡಿಯಾಲಬೈಲ್‌ ಅಕ್ಕಪಕ್ಕದ ಕೆಲವು ಭಾಗಗಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿದಿತ್ತು.