ವಿಜಯಪುರ: ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಲಾಭವಾಗಿತ್ತು. ನನ್ನ ಪ್ರಕಾರ ಈಗಲೂ ಸಹ ಈ ಮೈತ್ರಿಯಿಂದ ಕಾಂಗ್ರೆಸ್‌ಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆ ಇದೆ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ರಾಜ್ಯಕ್ಕೆ ಹೊಸದೇನು ಅಲ್ಲ. ಜೆಡಿಎಸ್ ಈ ಹಿಂದೆ ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಕರ್ನಾಟಕದ ರಾಜ್ಯಕಾರಣದಲ್ಲಿ ಆಗದೇ ಇರುವುದು ಯಾವುದೂ ಇಲ್ಲ ಎಂದರು.
ಬಿಜೆಪಿ, ಜೆಡಿಎಸ್ ಹೊಸ ಮೈತ್ರಿಯಿಂದ ಒಳ್ಳೆ ಪರಿಣಾಮ ಆಗುತ್ತದೆಯೋ, ದುಷ್ಪರಿಣಾಮ ಆಗುತ್ತದೆಯೋ ಎಂದು ಈಗಲೇ ಅಂದಾಜಿಸಲು ಆಗದು. ಚುನಾವಣೆ ಫಲಿತಾಂಶದ ಬಳಕವಷ್ಟೇ ಇದರ ಪರಿಣಾಮ ತಿಳಿಯಲು ಸಾಧ್ಯ ಎಂದರು.
ಕುರಿಗಾರರ ಮಹಾ ಸಮಾವೇಶ :
ಬೆಳಗಾವಿಯಲ್ಲಿ ಅಕ್ಟೋಬರ್ 3ರಂದು ಕುರಿಗಾರರ ರಾಷ್ಟ್ರೀಯ ಮಹಾ ಸಮಾವೇಶ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಶೆಫರ್ಡ್ ಇಂಡಿಯಾ ಇಂಟರ್ ನ್ಯಾಶನಲ್ ಸಂಸ್ಥಾಪಕ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ತಿಳಿಸಿದರು.
ಪಕ್ಷಾತೀತವಾಗಿ ನಡೆಯುತ್ತಿರುವ ಸಮಾವೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ದೇಶದಲ್ಲಿ ಬೇರೆ ಬೇರೆ ಹೆಸರಿನಲ್ಲಿ ಗುರುತಿಸಿಕೊಂಡಿರುವ ಕುರುಬ ಸಮಾಜವನ್ನು ಒಂದೇ ಹೆಸರಲ್ಲಿ ಒಗ್ಗೂಡಿಸುವ ಉದ್ದೇಶದಿಂದ 2014 ಅಕ್ಟೋಬರ್ 2ರಂದು ಸ್ಥಾಪನೆಯಾದ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಶನಲ್‌ಗೆ ಈಗ ಒಂಬತ್ತು ವರ್ಷವಾಗಿದೆ ಎಂದು ಹೇಳಿದರು.
ದೇಶದಲ್ಲಿ ಕುರುಬ ಸಮಾಜ ಸುಮಾರು 12 ಕೋಟಿ ಜನಸಂಖ್ಯೆ ಇದೆ. ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕು ಎಂಬ ಬಹುವರ್ಷದ ಬೇಡಿಕೆ ಇನ್ನೂ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಸಂಬಂಧ ಶೀಘ್ರದಲ್ಲೇ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಹಕ್ಕೊತ್ತಾಯ ಸಮಾವೇಶ ಏರ್ಪಡಿಸಲಾಗುವುದು ಎಂದರು.
ಕುರುಬರನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿಸಿದರು.
ಶೆಫರ್ಡ್ ಇಂಡಿಯಾ ಇಂಟರ್ ನ್ಯಾಶನಲ್ ಹಿರಿಯ ಉಪಾಧ್ಯಕ್ಷ ಎಚ್.ಎಂ. ರೇವಣ್ಣ, ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ನಾಗಾಜ, ಹರೀಶ್, ಪ್ರೇಮಲತಾ, ಸಿದ್ದಣ್ಣ ಮೇಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದಾರೆ.