ಮಂಗಳೂರು: ಬಂಟ್ವಾಳ ತಾಲ್ಲೂಕಿನಲ್ಲಿ ಎಂಡೊಸಲ್ಫಾನ್ ಸಂತ್ರಸ್ತ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿ ರಾಜೇಶ್ ರೈಗೆ ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ ಅವರು 10 ವರ್ಷಗಳ ಕಠಿಣ ಕಾರಾಗೃಹ ವಾಸವನ್ನು ವಿಧಿಸಿದ್ದಾರೆ.
‘ರಾಜೇಶ್ ರೈ (33), 2015ರ ಅ.1ರಂದು ಪರಿಶಿಷ್ಟ ಪಂಗಡದ ಯುವತಿಯ (19) ಮನೆಯಲ್ಲಿ ಬೇರೆ ಯಾರೂ ಇಲ್ಲದ ಸಂದರ್ಭದಲ್ಲಿ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ. ಶೇ 42ರಷ್ಟು ಅಂಗವೈಕಲ್ಯವಿರುವ ಸಂತ್ರಸ್ತ ಯುವತಿ ಮಂದ ಬುದ್ಧಿಯ ಸಮಸ್ಯೆ ಹೊಂದಿದ್ದಾರೆ. ಜಗಲಿಯಲ್ಲಿದ್ದ ಆಕೆಯನ್ನು ಮನೆಯೊಳಗೆ ವ್ಯಕ್ತಿಯೊಬ್ಬರು ಹೊತ್ತೊಯ್ದಿದ್ದನ್ನು ನೋಡಿದವರೊಬ್ಬರು, ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ತಂದೆಗೆ ವಿಚಾರ ತಿಳಿಸಿದ್ದರು. ತಂದೆ ಮನೆಗೆ ಧಾವಿಸಿದಾಗ, ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಬಾಗಿಲನ್ನು ಬಡಿದಾಗ ಒಳಗಡೆಯಿಂದ ಸ್ಪಂದನೆ ಬಂದಿರಲಿಲ್ಲ. ಅವರು ಕೆಲಸ ಮಾಡುತ್ತಿದ್ದ ತೋಟದ ಮಾಲೀಕರನ್ನು ಕರೆತರಲು ಹೊರಟಾಗ ರಾಜೇಶ್ ರೈ ಮನೆಯಿಂದ ಓಡಿ ಹೋಗಿದ್ದ. ಮನೆಯ ಒಳಗೆ ಯುವತಿಯು ವಿವಸ್ತ್ರಳಾಗಿದ್ದುದು ಕಂಡುಬಂದಿತ್ತು. ತನ್ನ ಮೇಲೆ ಅತ್ಯಾಚಾರ ನಡೆದ ಬಗ್ಗೆ ಯುವತಿ ತಾಯಿಗೆ ತಿಳಿಸಿದ್ದಳು. ಪೋಷಕರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಈ ಪ್ರಕರಣದಲ್ಲಿ ಸಂತ್ರಸ್ತೆ ಪರ ವಾದಿಸಿದ್ದ ವಿಶೇಷ ಸರ್ಕಾರಿ ವಕೀಲರಾದ ಜ್ಯೋತಿ ಪ್ರಮೋದ ನಾಯಕ ತಿಳಿಸಿದರು.
‘ಪ್ರಕರಣದ ತನಿಖೆ ನಡೆಸಿದ್ದ ಎಎಸ್ಪಿ ರಾಹುಲ್ ಕುಮಾರ್.ಎಸ್ ಆರೋಪಿ ವಿರುದ್ಧ 27 ಸಾಕ್ಷಿದಾರರನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. 2021ರ ಸೆ 22ರಂದು ಪ್ರಕರಣದ ವಿಚಾರಣೆ ಆರಂಭವಾಗಿತ್ತು. ಒಟ್ಟು 14 ಸಾಕ್ಷಿದಾರರನ್ನು ವಿಚಾರಣೆ ಒಳಪಡಿಸಲಾಗಿದೆ. ಸಂತ್ರಸ್ತೆಯ ಕಡಿಮೆ ಬುದ್ಧಿಮತ್ತೆಯವಳಾದ ಕಾರಣ ಆಕೆಯನ್ನು ವಿಶ್ವಾಸಕ್ಕೆ ಪಡೆದು ವಿಚಾರಣೆ ಮುಂದುವರಿಸಲು ಸಮಯ ತಗುಲಿದೆ’ ಎಂದರು.
’ಈ ಪ್ರಕರಣದಲ್ಲಿ ರಾಜೇಶ್ ರೈ ಮೇಲಿನ ಆರೋಪ ಸಾಬೀತಾಗಿದ್ದು, ಆತನಿಗೆ ಭಾರತೀಯ ದಂಡ ಸಂಹಿತೆ ಕಲಂ 376(2)(ಎಲ್) ಅಡಿಯಲ್ಲಿ (ಮಾನಸಿಕ ಅಥವಾ ದೈಹಿಕ ಅಂಗವಿಕಲರ ಮೇಲಿನ ಅತ್ಯಾಚಾರ) 10 ವರ್ಷದ ಕಠಿಣ ಸಜೆ ಹಾಗೂ 10 ಸಾವಿರ ರೂಪಾಯಿ ದಂಡ ಹಾಗೂ ಐಪಿಸಿ ಕಲಂ 448ರ ಅಡಿ ( ಮನೆಗೆ ಅಕ್ರಮ ಪ್ರವೇಶ) 3 ತಿಂಗಳ ಕಠಿಣ ಸಜೆಯನ್ನು ನ್ಯಾಯಾಧೀಶರಾದ ಪ್ರೀತಿ ಕೆ.ಪಿ ಅವರು ವಿಧಿಸಿದ್ದಾರೆ. ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಆದೇಶ ಹೊರಡಿಸಿದ್ದಾರೆ’ ಎಂದು ಮಾಹಿತಿ ನೀಡಿದರು.