Saturday, December 14, 2024
Homeರಾಜ್ಯಉತ್ತರ ಕರ್ನಾಟಕಆಸ್ತಿ ವಿವಾದ: ಸುಪಾರಿ ನೀಡಿದ್ದ ರಾಘವೇಂದ್ರ ಮಠದ ಧರ್ಮದರ್ಶಿ

ಆಸ್ತಿ ವಿವಾದ: ಸುಪಾರಿ ನೀಡಿದ್ದ ರಾಘವೇಂದ್ರ ಮಠದ ಧರ್ಮದರ್ಶಿ

ಹಾವೇರಿ: ತಾಲ್ಲೂಕಿನ ದೇವಗಿರಿ ಯಲ್ಲಾಪುರ ಪೆಟ್ರೋಲ್‌ ಬಂಕ್‌ ಬಳಿ ಮೋಟರ್‌ ಸೈಕಲ್‌ನಲ್ಲಿ ಬರುವ ಸಂದರ್ಭ ಜಯರಾಮ ಕಲ್ಲಾಪುರ ಅವರಿಗೆ ಚಾಕು ಇರಿತವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ನಗರದ ರಾಘವೇಂದ್ರಸ್ವಾಮಿ ಮಠದ ಧರ್ಮದರ್ಶಿ ಎಂದು ಹೇಳಿಕೊಳ್ಳುತ್ತಿರುವ ಉಡುಪಿ ಮೂಲದ, ಪ್ರಸ್ತುತ ಹಾವೇರಿ ನಿವಾಸಿ ಹರಿಕೃಷ್ಣ ಅನಂತ ರಾವ್ ಪ್ರಕರಣದ ಪ್ರಮುಖ ಆರೋಪಿ. ಮಠದ ಆಸ್ತಿ ವಿಚಾರವಾಗಿ ಜಯರಾಮ ಕಲ್ಲಾಪುರ ಅವರ ಹತ್ಯೆಗೆ ಸಂಚು ರೂಪಿಸಿ, ಸುಪಾರಿ ನೀಡಿದ್ದ.

ಧಾರವಾಡ ಜಿಲ್ಲೆಯ ಮಾಹಾಂತೇಶ ಜಮನಾಳ, ಸಾಗರ ಜಮನಾಳ, ಬೆಳಗಾವಿ ಜಿಲ್ಲೆಯ ಪ್ರಜ್ವಲ್ ದೊತರೆ, ರಾಘವೇಂದ್ರ ದೊಡ್ಡಮನಿ, ಅಜಯ್ ಸಾಲಹಳ್ಳಿ, ಶಿವಾನಂದ ತಗಡಿನಮನಿ, ಬೆಂಗಳೂರ ನಗರದ ವಾಸಿ ಸುನಿಲ್ ಕೆ. ಎನ್., ಜಿ.ಚಂಗಲರಾಯಪ್ಪ ಗಜಲಪ್ಪ ಬಂಧಿತ ಆರೋಪಿಗಳು.

ಪ್ರಕರಣ: ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯ ದೇವಗಿರಿ ಯಲ್ಲಾಪುರ ಪೆಟ್ರೋಲ್ ಬಂಕ್ ಹತ್ತಿರ ಆ.10ರಂದು ಸಂಜೆ 4.30ರ ವೇಳೆಗೆ ಜಯರಾಮ ಕಲ್ಲಾಪುರ ಮತ್ತು ಅವರ ಮಗ ವಾದಿರಾಜ ಕಲ್ಲಾಪುರ ಅವರು ತಮ್ಮ ಬೈಕ್‍ನಲ್ಲಿ ಹಾವೇರಿ ಕಡೆಗೆ ಬರುತ್ತಿದ್ದಾಗ ದುಷ್ಕರ್ಮಿಗಳು ಮೋಟಾರ್ ಸೈಕಲ್ ಮೇಲೆ ಬಂದು ಜಯರಾಮ ಅವರು ಹೋಗುತ್ತಿದ್ದ ಬೈಕನ್ನು ಬೆನ್ನು ಹತ್ತಿ ಜಯರಾಮನ ಬೆನ್ನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಹಾವೇರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಮುಖ ಆರೋಪಿಯಾದ ಹರಿಕೃಷ್ಣ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ ಎಂದು ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್‌ ಸಂತೋಷ ಪವಾರ್ ಮಾಹಿತಿ ನೀಡಿದ್ದಾರೆ.

ಪ್ರಕರಣ ಭೇದಿಸಿ ಆರೋಪಿತರನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಡಿವೈಎಸ್ಪಿ ಎಂ.ಎಸ್.ಪಾಟೀಲ್, ಸಿಪಿಐ ಎಸ್. ಕೆ. ಪವಾರ್, ಗ್ರಾಮೀಣ ಠಾಣೆಯ ಎಸ್‌ಐ ರವಿಕುಮಾರ, ಎಸ್.ಪಿ. ಹೊಸಮನಿ ಹಾಗೂ ಸಿಬ್ಬಂದಿಯಾದ ವೈ.ಎಫ್. ತಹಶೀಲ್ದಾರ್‌, ಸುರೇಶ ನಾಯಕ, ಎಂ.ಕೆ. ನದಾಫ್, ಮಾರುತಿ ಹಾಲಬಾವಿ, ಸತೀಶ ಮಾರಕಟ್ಟೆ ಇವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಅವರು ಬಹುಮಾನ ಘೋಷಿಸಿದ್ದಾರೆ.