Saturday, December 14, 2024
Homeಸುದ್ದಿರಾಜ್ಯವಿಷ ಕುಡಿದ ಪ್ರೇಮಿಗಳು: ಯುವಕ ಸಾವು

ವಿಷ ಕುಡಿದ ಪ್ರೇಮಿಗಳು: ಯುವಕ ಸಾವು

ಕನಕಪುರ: ತಾಲ್ಲೂಕಿನ ಚಾಮುಂಡಿಪುರದ ಪ್ರೇಮಿಗಳಿಬ್ಬರು ತಮಿಳನಾಡಿನ ಹೊಗೆನೇಕಲ್ ಜಲಪಾತದ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಯುವಕ ಉಮೇಶ್ (23) ಕೊನೆಯುಸಿರೆಳೆದಿದ್ದಾರೆ. ಯುವತಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಒಂದೇ ಗ್ರಾಮದವರಾದ ಇಬ್ಬರೂ ಅಂತರ್ಜಾತಿಯವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಉಮೇಶ್ ಇರುಳಿಗ ಹಾಗೂ ಪಿಯುಸಿ ಓದುತ್ತಿರುವ ಯುವತಿ ಲಂಬಾಣಿ ಸಮುದಾಯಕ್ಕೆ ಸೇರಿದವರಾಗಿದ್ದು, ಸೆ. 9ರಿಂದ ನಾಪತ್ತೆಯಾಗಿದ್ದರು. ಈ ಕುರಿತು, ಯುವತಿ ಕುಟುಂಬದವರು ಕೋಡಿಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಯುವತಿ ಪತ್ತೆಗಾಗಿ ಪೊಲೀಸರು ಎಲ್ಲಾ ಠಾಣೆಗಳಿಗೂ ಮಾಹಿತಿ ನೀಡಿದ್ದರು.

ಹೊಗೆನೇಕಲ್ ಜಲಪಾತದ ಬಳಿ ಪ್ರೇಮಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅನುಮಾನದ ಮೇರೆಗೆ ಅಲ್ಲಿಗೆ ಹೋಗಿ ಪರಿಶೀಲಿಸಿದಾಗ, ಇವರೇ ಎಂಬುದು ಖಚಿತವಾಯಿತು.

ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಉಮೇಶ್ ಮೃತಪಟ್ಟಿದ್ದಾರೆ. ತೀವ್ರ ಅಸ್ಪಸ್ಥಗೊಂಡಿರುವ ಯುವತಿಗೆ ಧರ್ಮಪುರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಗಳರಿನ ಕೆಂಪೇಗೌಡ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಪ್ರೇಮಿಗಳು ಮನೆ ಬಿಟ್ಟು ಹೋದ ಬಳಿಕ, ಇವರಿಗಾಗಿ ಎರಡೂ ಕುಟುಂಬದವರು ಹುಡುಕಾಡಿದ್ದರು. ಎಲ್ಲೂ ಸಿಗದಿದ್ದಾಗ ಯುವತಿ ಮನೆಯವರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಈ ವಿಷಯ ಯುವಕನಿಗೆ ಗೊತ್ತಾಗಿ, ತಮ್ಮ ಅಂತರ್ಜಾತಿ ಪ್ರೀತಿಯನ್ನು ಕುಟುಂಬದವರು ಒಪ್ಪಿಕೊಳ್ಳುವುದಿಲ್ಲ. ಯುವತಿಗೆ ಇನ್ನೂ ಹದಿನೆಂಟು ವರ್ಷವಾಗಿಲ್ಲದಿರುವುದರಿಂದ ತನಗೆ ಸಂಕಷ್ಟ ಎದುರಾಗುತ್ತದೆ ಅಂದುಕೊಂಡಿದ್ದಾನೆ. ಇದರಿಂದಾಗಿ, ಆತ್ಮಹತ್ಯೆ ನಿರ್ಧಾರ ಕೈಗೊಂಡಿರುವ ಅನುಮಾನವಿದ್ದು, ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.