Saturday, December 14, 2024
Homeರಾಜ್ಯಕಲ್ಯಾಣ ಕರ್ನಾಟಕಸಚಿವರಿಂದ ಕಿರುಕುಳ: ನನ್ನ ಸಾವಿಗೆ ಕಾರಣ ಇವರೆಂದು ಚೀಟಿ ಇದೆ ಎಂದ ಕಾರ್ಖಾನೆ ಅಧ್ಯಕ್ಷ

ಸಚಿವರಿಂದ ಕಿರುಕುಳ: ನನ್ನ ಸಾವಿಗೆ ಕಾರಣ ಇವರೆಂದು ಚೀಟಿ ಇದೆ ಎಂದ ಕಾರ್ಖಾನೆ ಅಧ್ಯಕ್ಷ

ಬೀದರ್: ಸಚಿವ ಈಶ್ವರ ಖಂಡ್ರೆಯವರು ನನಗೆ ಇಷ್ಟೊಂದು ಕಿರುಕುಳ ಕೊಡುತ್ತಿರುವುದು ಸರಿಯಲ್ಲ. ನಿಮ್ಮ ಕಿರುಕುಳದಿಂದ ನನಗೆ ಏನಾದರೂ ಆದರೆ ಅವರೇ ಜವಾಬ್ದಾರರಾಗುತ್ತಾರೆ. ನನ್ನ ಸಾವಿಗೆ ಕಾರಣ ಇವರೆಂದು ಚೀಟಿಯಲ್ಲಿ ಚೀಟಿಯಲ್ಲಿ ಬರೆದುಕೊಂಡು, ಕಿಸೆಯಲ್ಲಿ ಇಟ್ಟುಕೊಂಡು ಎಲ್ಲೆಡೆ ಓಡಾಡುತ್ತಿದ್ದೇನೆ’ ಎಂದು ನಾರಂಜಾ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಅವರು ಮಾತನಾಡಿದರು.

ಸಚಿವರ ವಿರುದ್ಧ ಈಗಾಗಲೇ ಸಂಬಂಧಿಸಿದವರಿಗೆ ದೂರು ಸಲ್ಲಿಸಲಾಗಿದೆ. ಬೇನಾಮಿ ಆಸ್ತಿಗಳಿಗೆ ಅಮರ್‌ ಖಂಡ್ರೆ ಜವಾಬ್ದಾರರು. ಇಷ್ಟು ದಿನಗಳವರೆಗೆ ಅಮರ್‌ ಖಂಡ್ರೆಯವರನ್ನು ಈಶ್ವರ ಖಂಡ್ರೆ ಹಚ್ಚಿಕೊಳ್ಳುತ್ತಿರಲಿಲ್ಲ. ಈಗ ಅವರನ್ನು ಹಚ್ಚಿಕೊಳ್ಳುತ್ತಿದ್ದಾರೆ. ಅವರಿಗೆ ಅದು ಸುತ್ತಿಕೊಳ್ಳುತ್ತದೆ ಎಂದರು.

 
ನಾನು ಜೈಲಿಗೆ ಹೋಗುವ ಪ್ರಶ್ನೆಯೇ ಇಲ್ಲ:

ಕಾನೂನು ಪ್ರಕಾರ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ (ಎನ್‌ಎಸ್‌ಎಸ್‌ಕೆ)  ದಾಸ್ತಾನು ಸಕ್ಕರೆ ಮಾರಾಟ ಮಾಡಲಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನಾನು ಜೈಲಿಗೆ ಹೋಗುವ ಪ್ರಶ್ನೆಯೇ ಬರುವುದಿಲ್ಲ ಎಂದು ಕಾರ್ಖಾನೆಯ ಅಧ್ಯಕ್ಷ ಡಿ.ಕೆ. ಸಿದ್ರಾಮ ತಿಳಿಸಿದರು.

ನಾನು ಕಾರ್ಖಾನೆಯ ಅಧ್ಯಕ್ಷನಾಗುವುದಕ್ಕಿಂತ ಮುಂಚೆ, 2020ರ ಮಾರ್ಚ್‌ನಲ್ಲಿ ಕಾರ್ಖಾನೆಯಲ್ಲಿದ್ದ ಸಕ್ಕರೆ ದಾಸ್ತಾನಿನ ಮೇಲೆ ₹78 ಕೋಟಿ ಒತ್ತೆ ಸಾಲ ಡಿಸಿಸಿ ಬ್ಯಾಂಕ್‌ನಿಂದ ಪಡೆಯಲಾಗಿತ್ತು. ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಬಾಕಿ ಪಾವತಿಸಬೇಕಾಗಿ ಬಂದದ್ದರಿಂದ ಹೈಕೋರ್ಟ್‌ನ ಕಲಬುರಗಿ ವಿಭಾಗೀಯ ಪೀಠದ ಅನುಮತಿ ಮೇರೆಗೆ ದಾಸ್ತಾನಿದ್ದ ಸಕ್ಕರೆ ಮಾರಾಟ ಮಾಡಲಾಯಿತು. ಇದರಲ್ಲಿ ಕಾನೂನು ಉಲ್ಲಂಘಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.
ವಾಸ್ತವ ಹೀಗಿರುವಾಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಕಾರ್ಖಾನೆಯ ಅಧ್ಯಕ್ಷ ಡಿ.ಕೆ. ಸಿದ್ರಾಮ ಹಾಗೂ ಅದರ ವ್ಯವಸ್ಥಾಪಕ ನಿರ್ದೇಶಕರನ್ನು ಜೈಲಿಗೆ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ನಾನು 20 ಅಡಿ ಎತ್ತರದ ಕಾಂಪೌಂಡ್‌ ಕಟ್ಟಿಲ್ಲ. ಜಿಲ್ಲೆಯ 83 ಕಡೆ ಈ ರೀತಿ ಗೋಡೆ ಕಟ್ಟಿದ್ದು, ಅದಕ್ಕೆ ರಾಯಲ್ಟಿ ಕೂಡ ಕಟ್ಟಿದ್ದಾರೋ ಇಲ್ಲವೋ? ನಾನು ಬೇನಾಮಿ ಆಸ್ತಿ ಮಾಡಿಲ್ಲ. ಅದಕ್ಕಾಗಿ ನನಗೆ ಟೆನ್ಶನ್‌ ಇಲ್ಲ. ಅವರ ಸಹೋದರನ ಹೆಸರಿನಲ್ಲಿರುವ ಬ್ಯಾಂಕ್‌ವೊಂದರಲ್ಲಿ ₹102 ಕೋಟಿ ಠೇವಣಿ ಇಟ್ಟಿದ್ದಾರೆ. ಅದನ್ನೆಲ್ಲ ಮಾಡಿದವರು ಜೈಲಿಗೆ ಹೋಗುತ್ತಾರೋ ಅಥವಾ ಇಲ್ಲವೋ ಎನ್ನುವುದನ್ನು ಹೇಳಬೇಕು. ಆದರೆ, ರೈತರಿಗಾಗಿ ಜೈಲಿಗೆ ಹೋಗಲು ಸಿದ್ಧನಿದ್ದೇನೆ ಎಂದು ಹೇಳಿದರು.

ಸುಳ್ಳು ಸುದ್ದಿ ಹಬ್ಬಿಸಿ ರೈತರ ದಾರಿ ತಪ್ಪಿಸುವುದನ್ನು ಸಚಿವ ಈಶ್ವರ ಖಂಡ್ರೆ ಅವರು ನಿಲ್ಲಿಸಬೇಕು. ಬಡ್ಡಿ ಎಲ್ಲವೂ ಸೇರಿ ಕಾರ್ಖಾನೆಯ ಒಟ್ಟು ಸಾಲ 669 ಕೋಟಿಗೆ ತಲುಪಿದೆ. ಆದರೆ, ಉಸ್ತುವಾರಿ ಸಚಿವರು ₹880 ಕೋಟಿ ಸಾಲ ಪಡೆದ ಬಗ್ಗೆ ತನಿಖೆ ನಡೆಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದಾರೆ. ಅಧಿಕಾರಿಗಳು ಒಂದು ಸಲ ಏಳು ದಿನಗಳಲ್ಲಿ, ನಂತರ ಮೂರು ದಿನಗಳಲ್ಲಿ, ಅನಂತರ ಒಂದೇ ದಿನದಲ್ಲಿ ತನಿಖೆ ನಡೆಸಿ ವರದಿ ಕೊಡುವಂತೆ ಸೂಚಿಸಿದ್ದಾರೆ. ಈ ರೀತಿ ಒತ್ತಡ ಹಾಕುವುದರ ಮೂಲಕ ಖಂಡ್ರೆಯವರು ನನ್ನನ್ನು ಜೈಲಿಗೆ ಹಾಕುವ ಆತುರದಲ್ಲಿ ಇದ್ದಂತೆ ಕಾಣಿಸುತ್ತಿದೆ ಎಂದು ಆರೋಪಿಸಿದರು.

18 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಾರಂಜಾ ಕಾರ್ಖಾನೆಗೆ ಮಾಜಿ ಅಧ್ಯಕ್ಷ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರು ಮರುಜೀವ ನೀಡಿದ್ದರು. ಡಿಸಿಸಿ ಬ್ಯಾಂಕ್‌ ಸಾಲದಲ್ಲಿಯೇ ಎಂಜಿಎಸ್‌ಎಸ್‌ಕೆ ಆರಂಭಗೊಂಡಿತು. ಅದರ ಸಾಲದ ಮೊತ್ತ 400 ಕೋಟಿಗೆ ತಲುಪಿದೆ. ಅದರ ತನಿಖೆ ಯಾವಾಗ ಮಾಡುತ್ತೀರಿ. ಉಮಾಕಾಂತ ನಾಗಮಾರಪಳ್ಳಿ ತಂದೆ ಸತ್ತ ಮಗ. ಅವರಿಗೇಕೆ ಅನ್ಯಾಯ ಮಾಡುತ್ತಿದ್ದೀರಿ. ಅವರಿಗೇಕೆ ಹೊಣೆ ಮಾಡುತ್ತಿದ್ದೀರಿ. ನಾಗಮಾರಪಳ್ಳಿ ಕುಟುಂಬ ಯಾರಿಗೂ ಅನ್ಯಾಯ ಮಾಡಿಲ್ಲ. ಅಧಿಕಾರ, ಹಣದ ದಾಹ ಹೆಚ್ಚಾಗಿದೆ. ಹಿಂದೆ ಸಿ.ಎಂ. ಆದವರು ಅನೇಕ ಸಲ ಸೋತಿದ್ದಾರೆ. ಅದನ್ನು ಖಂಡ್ರೆಯವರು ಮರೆಯಬಾರದು ಎಂದು ಹೇಳಿದರು.

ನಾಗಮಾರಪಳ್ಳಿ ಪರಿವಾರವಾದದ ಬಗ್ಗೆ ಈಶ್ವರ ಖಂಡ್ರೆಯವರಿಗೆ ಮಾತನಾಡುವ ನೈತಿಕತೆ ಇಲ್ಲ. ಭಾಲ್ಕಿ ಪಟ್ಟದ್ದೇವರು ಹುಟ್ಟಿ ಹಾಕಿದ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ತಮ್ಮ ವಶಕ್ಕೆ ‍ಪಡೆದಿದ್ದಾರೆ. ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಿಮ್ಮ ತಂದೆ ಹಾಗೂ ನೀವು 20 ವರ್ಷಗಳ ಕಾಲ ನಾಗಮಾರಪಳ್ಳಿಯವರ ಸಹಾಯದಿಂದ ಆಡಳಿತ ಮಂಡಳಿ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದೀರಿ. ನಿಮ್ಮ ಮನೆಯಲ್ಲಿ ನಿಮ್ಮ ತಂದೆ, ನಿಮ್ಮ ಸಹೋದರ ಹಾಗೂ ನೀವು ಶಾಸಕರಾಗಿ, ಮಂತ್ರಿಗಳಾಗಿ ಅಧಿಕಾರ ಅನುಭವಿಸಿದ್ದಿರಿ. ಈಗಲೂ ಅನುಭವಿಸುತ್ತಿದ್ದೀರಿ. ಈಗ ತಂದೆ ಸತ್ತ ಮಗ ಉಮಾಕಾಂತ ನಾಗಮಾರಪಳ್ಳಿ ಅವರ ಬೆನ್ನು ಬಿದ್ದಿರುವುದು ನಿಮಗೆ ನಾಚಿಕೆಯಾಗಬೇಕು ಎಂದು ನುಡಿದರು.

ನಾನು ಅಧ್ಯಕ್ಷನಾದ ಬಳಿಕ ಒಂದು ನಯಾ ಪೈಸೆ ಕಾರ್ಖಾನೆಯ ಹೆಸರಲ್ಲಿ ಸಾಲ ಮಾಡಿಲ್ಲ. ಇದ್ದ ಸಾಲದ ಅಸಲು ಬಡ್ಡಿ ಬೆಳೆದು 669 ಕೋಟಿಗೆ ತಲುಪಿದೆ. ಸಾಲ ಮರುಪಾವತಿಸಲು ಸದ್ಯದ ಮಟ್ಟಿಗೆ ಯಾವ ಕಾರ್ಖಾನೆಗಳಿಂದಲೂ ಸಾಧ್ಯವಾಗುತ್ತಿಲ್ಲ. ಮಾರ್ಚ್ 18ರಂದು ಹೈಕೋರ್ಟ್ ನಿರ್ದೇಶನದಂತೆ ದಾಸ್ತಾನು ಮಾಡಲಾಗಿದ್ದ 8 ಕೋಟಿ ಮೊತ್ತದ ಸಕ್ಕರೆ ಮಾರಾಟ ಮಾಡಿ ರೈತರಿಗೆ ಹಣ ಪಾವತಿಸಲಾಗಿದೆ. ರಾಜಕೀಯ ಕಾರಣಕ್ಕಾಗಿ ಕಾರ್ಖಾನೆ ಬಂದ್‌ ಆದರೆ ರೈತರು, ಕಾರ್ಮಿಕರ ಶಾಪ ತಟ್ಟುತ್ತದೆ. ಈಗಾಗಲೇ ಬಿಎಸ್‌ಎಸ್‌ಕೆ ಬಂದ್‌ ಆಗಿದೆ ಎಂದರು.

ಅಮರ್‌ ಖಂಡ್ರೆ ತಮ್ಮ ಸಹೋದರ ಎಂಬ ಕಾರಣಕ್ಕಾಗಿ ಡಿಸಿಸಿ ಬ್ಯಾಂಕಿಗೆ ತರಲು ಹೊರಟಿದ್ದಾರೆ. ಜಿಲ್ಲೆಯಲ್ಲಿ ಅನೇಕ ಕಾರ್ಯಕರ್ತರನ್ನು ನಾಗಮಾರಪಳ್ಳಿಯವರು ಬೆಳೆಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಅವರಿಂದ ಆಗಿದೆ. ಈ ಸಹಕಾರ ಕ್ಷೇತ್ರವನ್ನು ಖಂಡ್ರೆಯವರು ಹಾಳುಗೆಡವಬಾರದು ಎಂದು ಹೇಳಿದರು.

ಕಾರ್ಖಾನೆ ನಿರ್ದೇಶಕ ಶಶಿಕುಮಾರ ಸಂಗಮ ಹಾಜರಿದ್ದರು.