ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ 5 ಕೋಟಿ ರೂಪಾಯಿ ಪಡೆದು ವಂಚಿಸಿರುವ ಪ್ರಕರಣದ ಆರೋಪಿ ಚೈತ್ರಾ ಕುಂದಾಪುರ ವಿಚಾರಣೆ ವೇಳೆ ಅಸ್ವಸ್ಥರಾಗಿ ಕುಸಿದು ಬಿದ್ದರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೋಟೆಲ್ ಉದ್ಯಮಿ ಗೋವಿಂದ ಬಾಬು ಪೂಜಾರಿ ನೀಡಿದ್ದ ದೂರು ಆಧರಿಸಿ ಚೈತ್ರಾ ಹಾಗೂ ಇತರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.. ಎಲ್ಲರನ್ನೂ 10 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದರು.
ಗುರುವಾರ ಇಡೀ ದಿನ ಚೈತ್ರಾ ವಿಚಾರಣೆ ನಡೆಸಿದ್ದ ಪೊಲೀಸರು, ಮಹಿಳಾ ಸಾಂತ್ವನ ಕೇಂದ್ರಕ್ಕೆ ಸಂಜೆ ಬಿಟ್ಟು ಬಂದಿದ್ದರು. ಶುಕ್ರವಾರ ಬೆಳಗ್ಗೆ ಪುನಃ ಚೈತ್ರಾ ಅವರನ್ನು ಚಾಮರಾಜಪೇಟೆಯಲ್ಲಿರುವ ಕಚೇರಿಗೆ ಕರೆತಂದಿದ್ದರು.
ಸಿಸಿಬಿ ವಿಚಾರಣೆ ವೇಳೆಯಲ್ಲಿ ದಿಢೀರ್ ಕುಸಿದು ಬಿದ್ದ ಚೈತ್ರಾ ಬಾಯಲ್ಲಿ ನೊರೆ ಬರಲಾರಂಭಿಸಿತ್ತು. ಕೂಡಲೇ ಪೊಲೀಸರು ಚೈತ್ರಾ ಅವರನ್ನು ತಮ್ಮದೇ ಜೀಪಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು.
‘ಚೈತ್ರಾ ಅಸ್ವಸ್ಥಗೊಂಡು ತಲೆಸುತ್ತಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಲಾಗುವುದು’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.