Saturday, December 14, 2024
Homeಸುದ್ದಿರಾಷ್ಟ್ರೀಯಮುಂಬೈ ಕಟ್ಟದಡಲ್ಲಿ ಅಗ್ನಿ ಅವಘಡ: ವ್ಯಕ್ತಿ ಸಾವು

ಮುಂಬೈ ಕಟ್ಟದಡಲ್ಲಿ ಅಗ್ನಿ ಅವಘಡ: ವ್ಯಕ್ತಿ ಸಾವು

ಮುಂಬೈ: ಇಲ್ಲಿಯ ಕರ್ರಿ ರಸ್ತೆಯ 61 ಅಂತಸ್ತಿನ ಫ್ಲ್ಯಾಟ್‌ ಒಂದರಲ್ಲಿ ಶುಕ್ರವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವಿಘ್ನ ಪಾರ್ಕ್‌ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ಬೆಂಕಿ ಹೊತ್ತಿಕೊಂಡಿದ್ದ 19ನೇ ಮಹಡಿಯ ಬಾಲ್ಕಾನಿಯಿಂದ ಕೆಳಕ್ಕೆ ಬಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಅವರನ್ನು ಕಟ್ಟಡದ ಭದ್ರತಾ ಸಿಬ್ಬಂದಿ ಅರುಣ್‌ ತಿವಾರಿ ಎಂದು ಗುರುತಿಸಲಾಗಿದೆ. ಈ ಘಟನೆಯ ವಿಡಿಯೊ ವೈರಲ್‌ ಆಗಿದೆ.

‘ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಅರಿವಿಗೆ ಬರುತ್ತಿದ್ದಂತೆ ಅರುಣ್‌ 19ನೇ ಅಂತಸ್ತಿಗೆ ಓಡಿದರು. ಆದರೆ ತಾವು ಇರುವ ಜಾಗದಲ್ಲೂ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಯುತ್ತಿದ್ದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಾಲ್ಕನಿಗೆ ಓಡಿದರು. ಬಾಲ್ಕಾನಿಯ ಸರಳುಗಳನ್ನು ಹಿಡಿದು ಹಲವಾರು ನಿಮಿಷಗಳ ಕಾಲ ನೇತಾಡುತ್ತಿದ್ದರು. ಹತೋಟಿ ತಪ್ಪುತ್ತಿದ್ದಂತೆ ಕೆಳಗೆ ಬಿದ್ದು ಸಾವಿಗೀಡಾದರು’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದು ನಾಲ್ಕನೇ ಹಂತದ ದೊಡ್ಡ ಅಗ್ನಿ ಅವಘಡ. ಸಂಜೆ ಸುಮಾರು 4.20ರ ವೇಳೆಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರಂತದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮುಂಬೈ ಮುನಿಸಿಪಲ್‌ ಆಯುಕ್ತರಾದ ಇಕ್ಬಾಲ್‌ ಸಿಂಗ್‌ ಚಹಲ್‌ ಹೇಳಿದ್ದಾರೆ. ಉತ್ತಮ ತರಬೇತಿ ಪಡೆದಿರುವ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಕಟ್ಟಡದಲ್ಲಿ ನೇಮಿಸಿದ್ದರೆ ಸಂತ್ರಸ್ತನ ಜೀವ ಉಳಿಯುತ್ತಿತ್ತು ಎಂದು ಮುಂಬೈ ಮೇಯರ್‌ ಕಿಶೋರಿ ಪಡ್ನೇಕರ್‌ ಹೇಳಿದ್ದಾರೆ.

ತಿವಾರಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಮೊದಲು ಅವರನ್ನು ಉಳಿಸಲು 15 ನಿಮಿಷಗಳ ಸಮಯಾವಕಾಶ ಇತ್ತು. ಅಲ್ಲಿಯ ಭದ್ರತಾ ಸಿಂಬ್ಬಂದಿ ಬಟ್ಟೆ, ಹೊದಿಕೆ ಅಥವಾ ಹಾಸಿಗೆಗಳ ಸಹಾಯದಿಂದ ತಿವಾರಿಯನ್ನು ಉಳಿಸಬಹುದಿತ್ತು. ಅಗ್ನಿ ಶಾಮಕ ದಳ ಏಣಿಯ ವ್ಯವಸ್ಥೆ ಮಾಡುವ ಮೊದಲು ಅವರು ಕೆಳಗೆ ಬಿದ್ದರು ಎಂದು ಕಿಶೋರಿ ಹೇಳಿದ್ದಾರೆ.