ಬೆಂಗಳೂರು: ನಟ ಜಗ್ಗೇಶ್ ಆರೋಗ್ಯವಾಗಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವ ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ ಎಂದು ತೋತಾಪುರಿ-2 ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಶುಕ್ರವಾರ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ನಡೆಸಿದ ಸಾಂಕೇತಿಕ ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್ ಭಾಗವಹಿಸಿರಲಿಲ್ಲ. ಗುರುವಾರ ಬಿಡುಗಡೆಗೊಂಡ ಅವರ ‘ತೋತಾಪುರಿ-2’ ಚಿತ್ರದ ಪ್ರಚಾರ ಕಾರ್ಯದಲ್ಲಿಯೂ ಭಾಗಿಯಾಗಿರಲಿಲ್ಲ. ಇದರ ಬೆನ್ನಲ್ಲೇ ನಟ ಜಗ್ಗೇಶ್ ಸಿಟಿ ಸ್ಕ್ಯಾನ್‌ಗೆ ಒಳಪಟ್ಟಿರುವ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಶುಕ್ರವಾರ ಸಂಜೆ ಹಂಚಿಕೊಂಡಿದ್ದಾರೆ.
ಉತ್ತರ ಭಾರತ ಪ್ರವಾಸದಲ್ಲಿರುವ ತಾವು ಬೆನ್ನುನೋವಿನಿಂದ ಬಳಲುತ್ತಿದ್ದು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಈಗ ವಿಶ್ರಾಂತಿಯಲ್ಲಿರುವೆ’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಆತಂಕಪಡುವ ಅಗತ್ಯವಿಲ್ಲ. 4 ದಿನಗಳ ಹಿಂದೆ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದಾರೆ. ಆಯಾಸಗೊಂಡಿರುವುದರಿಂದ ಸದ್ಯ ಯಾವ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದೆ ವಿಶ್ರಾಂತಿಯಲ್ಲಿದ್ದಾರೆ’ ಎಂದು ಸುರೇಶ್ ಹೇಳಿದರು.