ಹೊಸಕೋಟೆ: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 10 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಆರು ಮಂದಿ ಆರೋಪಿಗಳನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಎಚ್.ವಿ. ಅಜಯ್ ಕುಮಾರ್(41), ಬೆಂಗಳೂರಿನ ಬಿದರಹಳ್ಳಿ ಹೋಬಳಿ ಆವಲಹಳ್ಳಿಯ ಜ್ಞಾನಮೂರ್ತಿ(42), ಮಾಲೂರು ತಾಲ್ಲೂಕಿನ ಮಾಸ್ತಿಯ ಬಿ.ಕೆ. ರವೀಂದ್ರ (36), ಬೈರಸಂದ್ರ ಗ್ರಾಮದ ಮುರುಗೇಶ್ (27), ಕುಡಿಯನೂರು ಗ್ರಾಮದ ಜಿ. ಮುನಿರಾಜು (33) ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಆರ್. ಕುಮಾರಸ್ವಾಮಿ (38) ಬಂಧಿತರು.
ಆರೋಪಿಗಳಿಂದ 7.14 ಲಕ್ಷ ನಗದು, ಎರಡು ಕಾರು, 2 ವಾಕಿಟಾಕಿ, ಒಂದು ಲಾಟಿ, ಒಂದು ಮಿಲ್ಟ್ರಿ ಟೋಪಿ ಹಾಗೂ 6 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಯಲಹಂಕ ಅಗ್ರಹಾರದಲ್ಲಿ ಆರೋಪಿಗಳು ವಾಸಿಸುತ್ತಿದ್ದರು. ಪ್ರಮುಖ ಆರೋಪಿ ಶಿವಕುಮಾರ್ ಪರಾರಿಯಾಗಿದ್ದಾನೆ.
ಆರೋಪಿ ಶಿವಕುಮಾರ್ ವಿಜಯಪುರ ಜಿಲ್ಲೆಯ ನೀವರಗಿ ಗ್ರಾಮದ ಗೋಪಾಲ್ ಮಲ್ಲಪ್ಪ ಕಂಬಾಳ ಎಂಬುವರಿಗೆ ಸರ್ಕಾರಿ ಕೆಲಸದ ಆಸೆ ತೋರಿಸಿದ್ದ. ಅ. 8ರಂದು ಬೆಂಗಳೂರಿಗೆ ಹಣ ತರಲು ಹೇಳಿದ್ದ. ಆತನ ಮಾತು ನಂಬಿದ್ದ ಗೋಪಾಲ್ ಬೆಂಗಳೂರಿಗೆ ಹಣ ಸಮೇತ ಬಂದು ಆತನಿಗೆ ಮೊಬೈಲ್ ಕರೆ ಮಾಡಿದ್ದರು. ನಂತರ ಆರೋಪಿಯು ತಾನು ಹೊಸಕೋಟೆಯಲ್ಲಿದ್ದು, ಅಲ್ಲಿನ ಸಂತೆ ಸರ್ಕಲ್ ಬಳಿಯ ಸರ್ಕಾರಿ ಆಸ್ಪತ್ರೆ ಮುಂಭಾಗ ಬರಲು ತಿಳಿಸಿದ್ದ. ಅಲ್ಲಿಗೆ ಹೋಗಿದ್ದ ಗೋಪಾಲ್ ಅವರನ್ನು ಆರೋಪಿಯು ಕಾರಿನಲ್ಲಿ ಕರೆದುಕೊಂಡು ಮಾಲೂರು ಕಡೆಗೆ ಹೋಗುವ ಸಂದರ್ಭದಲ್ಲಿ ಆರೋಪಿಯ ಸ್ನೇಹಿತರು ಕಾರನ್ನು ಅಡ್ಡಗಟ್ಟಿದ್ದರು.
ತಾವು ಪೊಲೀಸರೆಂದು ಹೇಳಿ ಕಾರಿನಲ್ಲಿದ್ದ ಗೋಪಾಲ್ ಬಳಿಯಿದ್ದ ಹಣ ಕಿತ್ತುಕೊಂಡು ತಾಲ್ಲೂಕಿನ ದೇವನಗುಂದಿ ಕ್ರಾಸ್ ಬಳಿ ಕಾರಿನಿಂದ ಅವರನ್ನು ತಳ್ಳಿ ಪರಾರಿಯಾಗಿದ್ದರು. ಈ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.