Saturday, December 14, 2024
Homeರಾಜ್ಯಬೆಂಗಳೂರು ವಿಭಾಗನಟ ನಾಗಭೂಷಣ ಕಾರು ಅಪಘಾತ: ಮಹಿಳೆ ಸಾವು

ನಟ ನಾಗಭೂಷಣ ಕಾರು ಅಪಘಾತ: ಮಹಿಳೆ ಸಾವು

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಟ ನಾಗಭೂಷಣ ಕಾರು ಅಪಘಾತವಾಗಿದ್ದು, ಪಾದಚಾರಿ ಎಸ್.ಪ್ರೇಮಾ (48) ಅವರು ಮೃತಪಟ್ಟಿದ್ದಾರೆ.

‘ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆ ನಿವಾಸಿ ಪ್ರೇಮಾ, ಪತಿ ಬಿ. ಕೃಷ್ಣ (58) ಜೊತೆ ನಡೆದುಕೊಂಡು ಹೊರಟಿದ್ದರು. ಇದೇ ವೇಳೆ ನಾಗಭೂಷಣ ಕಾರು ಅತೀ ವೇಗದಲ್ಲಿ ಬಂದು ದಂಪತಿಗೆ ಗುದ್ದಿದೆ. ನಂತರ, ಅದೇ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ’ ಎಂದು ಪೊಲೀಸರು ಹೇಳಿದರು.

‘ತೀವ್ರ ಗಾಯಗೊಂಡು ಪ್ರೇಮಾ ಮೃತಪಟ್ಟಿದ್ದಾರೆ. ಕೃಷ್ಣ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.’

‘ನಾಗಭೂಷಣ ಅವರು ಶನಿವಾರ ರಾತ್ರಿ ತಮ್ಮ ಕಿಯಾ ಕಾರಿನಲ್ಲಿ ವಸಂತಪುರ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದರು. ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ನಾಗಭೂಷಣ ಕಾರು ಚಲಾಯಿಸಿದ್ದರು. ಇದರಿಂದಲೇ ಅಪಘಾತ ಆಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

‘ಮೃತ ಪ್ರೇಮಾ ಅವರ ಸಂಬಂಧಿಕರು ದೂರು ನೀಡಿದ್ದಾರೆ. ನಾಗಭೂಷಣ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರು ಜಪ್ತಿ ಮಾಡಲಾಗಿದೆ. ನಾಗಭೂಷಣ ಅವರನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.