Monday, January 6, 2025
Homeಮೈಸೂರು ವಿಭಾಗಚಾಮರಾಜನಗರಗಾಯಗೊಂಡ ಹುಲಿ: ಚಿಕಿತ್ಸೆಗಾಗಿ ಮೈಸೂರಿಗೆ

ಗಾಯಗೊಂಡ ಹುಲಿ: ಚಿಕಿತ್ಸೆಗಾಗಿ ಮೈಸೂರಿಗೆ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಗಂಜಿಕಟ್ಟೆ ಅರಣ್ಯ ಪ್ರದೇಶದಲ್ಲಿ ಗಾಯಗೊಂಡು ನಿತ್ರಾಣಗೊಂಡಿದ್ದ ಗಂಡು ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸೆರೆ ಹಿಡಿದಿದ್ದಾರೆ.

ತುರ್ತು ಚಿಕಿತ್ಸೆಯ ಅಗತ್ಯವಿರುವುದರಿಂದ ಮೈಸೂರಿನ ಮೃಗಾಲಯದ ಕೂರ್ಗಳ್ಳಿ ಪುನರ್ವಸತಿ ಮತ್ತು ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಏಳರಿಂದ ಎಂಟು ವರ್ಷದ ಗಂಡು ಹುಲಿಯು ನಿಶಕ್ತಿಯಿಂದ ಬಳಲುತ್ತಿತ್ತು. ಅದರ ಮೇಲೆ ನಿಗಾ ಇರಿಸಲು ಸಿಬ್ಬಂದಿ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿದ್ದರು. ಹುಲಿಯು ಸಹಜವಾಗಿ ಚೇತರಿಸಿಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಅಧಿಕಾರಿಗಳು ಅದನ್ನು ಸೆರೆ ಹಿಡಿಯುವ ನಿರ್ಧಾರ ಕೈಗೊಂಡರು.

ಅರಿವಳಿಕೆ ಚುಚ್ಚುಮದ್ದು ನೀಡಿ ಗುರುವಾರ ಹುಲಿ ಸೆರೆ ಹಿಡಿಯಲಾಗಿದೆ. ಹುಲಿ ಮೈ ಮೇಲೆ ಆಗಿರುವ ಗಾಯಗಳನ್ನು ಗಮನಿಸಿದರೆ ಆನೆಯೊಂದಿಗೆ ಕಾದಾಡುವ ಸಮಯದಲ್ಲಿ ದಂತ ಚುಚ್ಚಿ ಗಾಯ ಆದ ರೀತಿ ಕಾಣಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಬುಧವಾರ ಬಂಡೀಪುರ ಸಫಾರಿ ವಲಯದ ಗಂಜಿಕಟ್ಟೆ ಬಳಿ ಹುಲಿ ನಿತ್ರಾಣವಾಗಿರುವುದು ಕಂಡು ಬಂದಿತ್ತು. ಗುರುವಾರ ಅರಿವಳಿಕೆ ನೀಡಿ ಸೆರೆ ಹಿಡಿದು ಚೇತರಿಕೆಗೆ ಚುಚ್ಚುಮದ್ದು ನೀಡಲಾಗಿದೆ. ಚಿಕಿತ್ಸೆಗೆ ಹುಲಿ ಸ್ಪಂದಿಸುವ ಲಕ್ಷಣಗಳು ಕಂಡು ಬಂದಿದೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಲಾಯಿತು’ ಎಂದು ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್.ನಟೇಶ್ ತಿಳಿಸಿದ್ದಾರೆ.

ಇಲಾಖಾ ಪಶು ವೈದ್ಯಾಧಿಕಾರಿಗಳಾದ ಡಾ.ವಾಸಿಂ ಮಿರ್ಜಾ, ಡಾ.ಮುಜೀಬ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಪರಮೇಶ್, ಸುಮಿತ್ ಕುಮಾರ್ ಎಸ್.ಪಾಟೀಲ, ಬಂಡೀಪುರ ವಲಯ ಅರಣ್ಯಾಧಿಕಾರಿ ಪಿ.ನವೀನ್‌ಕುಮಾರ್, ಬಂಡೀಪುರ ವಲಯದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ಉಪಸ್ಥಿತರಿದ್ದರು.