Saturday, December 14, 2024
Homeರಾಜ್ಯಉತ್ತರ ಕರ್ನಾಟಕಮೊಸರಲ್ಲಿ ಕಲ್ಲು ಹುಡುಕುತ್ತಿರುವ ಕಾಂಗ್ರೆಸ್‌: ಮುಖ್ಯಮಂತ್ರಿ

ಮೊಸರಲ್ಲಿ ಕಲ್ಲು ಹುಡುಕುತ್ತಿರುವ ಕಾಂಗ್ರೆಸ್‌: ಮುಖ್ಯಮಂತ್ರಿ

ಹಾವೇರಿ: ‘ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಲ್ಲ ವರ್ಗಗಳ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿ ಪರ ‘ಸಾಮಾಜಿಕ ಸಮೀಕರಣ’ ಕಂಡು ಬರುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾನಗಲ್‌ ಪಟ್ಟಣದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ಸಿಂದಗಿ ಮತ್ತು ಹಾನಗಲ್‌ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಅಂತರದಿಂದ ಜಯ ಸಾಧಿಸುತ್ತದೆ. ಜನರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ. ಕಾಂಗ್ರೆಸ್ ಬೇರೆಯವರ ‘ದೌರ್ಬಲ್ಯಗಳ’ ಮೇಲೆ ಮತಗಳನ್ನು ಪಡೆಯಲು ಯತ್ನಿಸುತ್ತದೆ. ನಾವು ನಮ್ಮ ‘ಶಕ್ತಿ’ಯ ಮೇಲೆ ಮತಗಳನ್ನು ಪಡೆಯುತ್ತೇವೆ ಎಂದರು.

ವಿಧಾನಸೌಧಕ್ಕೆ ಬೀಗ ಹಾಕಿಲ್ಲ:

ಡಿ.ಕೆ.ಶಿವಕುಮಾರ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ‘ವಿಧಾನಸೌಧಕ್ಕೆ ನಾವು ಬೀಗ ಹಾಕಿಲ್ಲ. ನಮ್ಮ ಸಚಿವ ಸಂಪುಟದಲ್ಲಿ ಒಗ್ಗಟ್ಟಿದೆ. ಹೀಗಾಗಿ ಎರಡು–ಮೂರು ದಿನ ಸಚಿವರು ಹಾನಗಲ್‌ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಿದರೆ ಕಾಂಗ್ರೆಸ್‌ನವರಿಗೆ ಏಕೆ ಆತಂಕ? ಸೋಲಿನ ಭಯದಿಂದ ಈ ರೀತಿ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಪ್ರಣಾಳಿಕೆ ಜನರ ಪುರುಷಾರ್ಥಕ್ಕೆ:

‘ಹಾನಗಲ್‌ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಡಿ.ಕೆ.ಶಿವಕುಮಾರ್‌ ಅವರ ಪುರುಷಾರ್ಥಕ್ಕಲ್ಲ, ಜನರ ಪುರುಷಾರ್ಥಕ್ಕೆ. ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಒಂದು ಕೆಲಸ ಮಾಡಿ ಮತ್ತೊಂದು ನಿಲ್ಲಿಸುವುದು ಕಾಂಗ್ರೆಸ್‌ ಸಂಸ್ಕೃತಿ. ಹಾನಗಲ್‌ ಪಟ್ಟಣವನ್ನು ಯೋಜನಾಬದ್ಧವಾಗಿ ಬೆಳೆಸುವ ಗುರಿ ಇದೆ’ ಎಂದರು.

‘ಕೋವಿಡ್ ಸಾವನ್ನು ಬಿಜೆಪಿ ಸಂಭ್ರಮಿಸುತ್ತಿದೆ ಎಂಬ ಡಿ.ಕೆ.ಶಿವಕುಮಾರ್‌ ಆರೋಪಕ್ಕೆ, ಕಾಂಗ್ರೆಸ್‌ನವರು ನೋಡುವ ದೃಷ್ಟಿಯನ್ನು ಬದಲಿಸಿಕೊಳ್ಳಬೇಕು. ಕೋವಿಡ್‌ ನಿಯಂತ್ರಿಸಲು ಇರುವ ಏಕೈಕ ಸುರಕ್ಷಾ ಚಕ್ರವೇ ಲಸಿಕೆ. ದೇಶದ 100 ಕೋಟಿ ಜನರಿಗೆ ಲಸಿಕೆ ಹಾಕಿದ ಪರಿಣಾಮ, ಜನರು ಸಾವಿನ ದವಡೆಯಿಂದ ಹೊರಬಂದಿದ್ದಾರೆ. ಜನರಲ್ಲಿ ವಿಶ್ವಾಸ ಮೂಡಿಸುವುದಕ್ಕಾಗಿ ಲಸಿಕಾಕರಣದ ಸಂಭ್ರಮಾಚರಣೆ ನಡೆಯುತ್ತಿದೆ. ‘ಮೊಸರಲ್ಲಿ ಕಲ್ಲು ಹುಡುಕುವ ಕೆಲಸ’ವನ್ನು ಕಾಂಗ್ರೆಸ್ ಬಿಡಬೇಕು’ ಎಂದು ತಿರುಗೇಟು ನೀಡಿದರು.