ಹುಣಸೂರು: ಪಿರಿಯಾಪಟ್ಟಣದಿಂದ ಮೈಸೂರಿಗೆ ತೆರಳುತ್ತಿದ್ದ ತುರ್ತುವಾಹನದ ಮೇಲೆ ಮರ ಬಿದ್ದಿದೆ. ಚಾಲಕ ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿ ಭಾರಿ ಮಳೆಯಲ್ಲಿ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಿಂದ ಮೈಸೂರಿಗೆ ಸಾಗಿಸುತ್ತಿದ್ದ ತುರ್ತುವಾಹನದ ಮೇಲೆ ಜವನಿಕುಪ್ಪೆ ಗ್ರಾಮದ ಬಳಿ ರಸ್ತೆ ಪಕ್ಕದ ಮರ ಬಿದ್ದು ತುರ್ತುವಾಹನ ಸಂಪೂರ್ಣ ಜಖಂಗೊಂಡಿದೆ. ಈ ಘಟನೆಯಲ್ಲಿ ಚಾಲಕ ಮಹದೇವ್ ಎಂಬುವವರಿಗೆ ಗಾಯವಾಗಿದ್ದು, ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪರ್ಯಾಯ ವ್ಯವಸ್ಥೆ: ಮೈಸೂರಿನ ಆಸ್ಪತ್ರೆಗೆ ತೆರಳುತ್ತಿದ್ದ ರೋಗಿಗೆ ಯಾವುದೇ ಸಮಸ್ಯೆ ಆಗಿಲ್ಲ. ಇವರನ್ನು ಪರ್ಯಾಯ ವಾಹನದಲ್ಲಿ ಕಳುಹಿಸಲಾಗಿದೆ ಎಂದು ಹುಣಸೂರು ಗ್ರಾಮಾಂತರ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ತಿಳಿಸಿದ್ದಾರೆ.