ಯಾದಗಿರಿ: ನಗರಸಭೆ ಸಿಬ್ಬಂದಿಯೊಬ್ಬರು ಸಾರ್ವಜನಿಕರೊಬ್ಬರ ನೀರಿನ ಶುಲ್ಕವನ್ನು ತಾವೇ ಬಳಸಿಕೊಂಡ ಆರೋಪ ಕೇಳಿ ಬಂದಿದ್ದು, ಅಧಿಕಾರಿಗಳು ಅವರ ವಿರುದ್ಧ ಕ್ರಮಕ್ಕೆ ವರದಿ ತಯಾರಿಸುತ್ತಿದ್ದಾರೆ.
ನಗರದ ನಿವಾಸಿಯೊಬ್ಬರ ನಳದ ನೀರಿನ ಶುಲ್ಕ 2,880 ರೂಪಾಯಿ ಬ್ಯಾಂಕಿಗೆ ಜಮಾ ಮಾಡದೇ ಸ್ವತಂಕ್ಕೆ ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಯಾದಗಿರಿ ನಗರಸಭೆಯಲ್ಲಿ ಮೊದಲು ಕೆನರಾ ಬ್ಯಾಂಕ್‌ನಲ್ಲಿ ಖಾತೆ ಇತ್ತು. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಯೆಸ್ ಬ್ಯಾಂಕ್‌ಗೆ ಬದಲಾಯಿಸಲಾಗಿದೆ. ಆದರೆ, ನಗರಸಭೆ ಸಿಬ್ಬಂದಿಯೊಬ್ಬರು ನೀರಿನ ಶುಲ್ಕದ ಚಲನ್‌ಗೆ ನಕಲಿ ಸೀಲ್ ಹಾಕಿ ಬ್ಯಾಂಕ್‌ಗೆ ತುಂಬದೇ ಸ್ವತಂಕ್ಕೆ ಬಳಸಿಕೊಂಡಿದ್ದ ಆರೋಪ ಕೇಳಿ ಬರುತ್ತಿದೆ.
‘ನಗರಸಭೆ ಸಿಬ್ಬಂದಿ ನೀರಿನ ಶುಲ್ಕವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಸಾರ್ವಜನಿಕರು ಇನ್ನು ಮುಂದೆ ಎಚ್ಚರಿಕೆ ವಹಿಸಿ ತಾವೇ ಬ್ಯಾಂಕ್‌ಗೆ ತೆರಳಿ ಶುಲ್ಕ ಭರಿಸುವುದರಿಂದ ಅವ್ಯಾವಹಾರಗಳನ್ನು ತಡೆಗಟ್ಟಬಹುದು’ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಬಿ.ಟಿ.ನಾಯಕ.
ಈಗಾಗಲೇ ಹಣ ದುರ್ಬಳಕೆ ಮಾಡಿಕೊಂಡ ಸಿಬ್ಬಂದಿ ಪೌರಾಯುಕ್ತರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.