Monday, May 19, 2025
Homeರಾಜ್ಯಉತ್ತರ ಕರ್ನಾಟಕಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ

ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ

ಸೋಲಾಪುರ: ನಗರದ ರೈಲ್ವೆ ಲೈನ್ ರಸ್ತೆಯಲ್ಲಿರುವ ’ಸೆವೆನ್ ಹೆವನ್‘ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಸಂಜೆ ಬೆಂಕಿ ಅವಘಡ ಸಂಭವಿಸಿದೆ.

ಬೆಂಕಿಯ ಜ್ವಾಲೆ ಮತ್ತು ಹೊಗೆ ಎಲ್ಲಕಡೆ ಹರಡಿಕೊಂಡಿತು. 40 ಜನರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಮಹಾನಗರ ಪಾಲಿಕೆ, ಅಗ್ನಿಶಾಮಕದಳ, ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಸುಮಾರು ಮೂರೂವರೆ ಗಂಟೆ ಕಾರ್ಯಾಚರಣೆ ನಡೆಸಿ, ಬೆಂಕಿ ಆರಿಸಿ ಎಲ್ಲರನ್ನು ರಕ್ಷಿಸಲಾಯಿತು.

ಯಾವುದೇ ಪ್ರಾಣ ಹಾನಿ ಆಗಿಲ್ಲ .ಸುಮಾರು 35 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.

ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 60 ರಿಂದ 65 ಮಂದಿ ವಾಸವಾಗಿದ್ದು, ಕಟ್ಟಡದ ನೆಲ ಮಾಳಿಗೆಯಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದಂತೆ ಅದು ಬಿರುಗಾಳಿಯ ಸ್ವರೂಪ ಪಡೆಯಿತು.

ಜ್ವಾಲೆ ಮತ್ತು ಹೊಗೆ ಎಲ್ಲ ಕಡೆ ವ್ಯಾಪಕವಾಗಿ ಹರಡಿತ್ತು. ಬೆಂಕಿ ಕಾಣಿಸಿಕೊಂಡಾಗ ಕೆಲವರು ಹೊರಗೆ ಓಡಿಬಂದರು. ಹಲವರು ಕಟ್ಟಡದಲ್ಲಿ ಸಿಲುಕಿಕೊಂಡಿದ್ದರು. ಕಟ್ಟಡದಲ್ಲಿ ಸಿಲುಕಿಕೊಂಡ ಮಕ್ಕಳು ಮಹಿಳೆಯರು ವೃದ್ಧರು ಎಲ್ಲರನ್ನೂ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕದಳದವರು ಎತ್ತಿಕೊಂಡು ಸುರಕ್ಷಿತವಾಗಿ ಹೊರಗೆ ತಂದರು

ಉಪಪೊಲೀಸ್ ಆಯುಕ್ತರಾದ ಡಾ. ವೈಶಾಲಿ ಕಡುಕರ್, ಬಾಪೂ ಬಂಗಾರ, ಸಹಾಯಕ ಪೊಲೀಸ್ ಕಮಿಷನರ್ ಪ್ರೀತಿ ಟಿಪರೆ, ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಸಂದೀಪ್ ಶಿಂಧೆ, ಸದರ್ ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಈ ಕಾರ್ಯಾಚರಣೆಯಲ್ಲಿ ನಗರ ಸೇವಕ ಚೇತನ ನರೋಟೆ ಮತ್ತು ಅವರ 250 ಕಾರ್ಯಕರ್ತರು ಭಾಗವಹಿಸಿದ್ದರು.