ಕೂಡ್ಲಿಗಿ: ತಾಲ್ಲೂಕಿನ ಅಪ್ಪೇನಹಳ್ಳಿ ತಾಂಡಾದಲ್ಲಿ ಬುಧವಾರ ರಾತ್ರಿ ಮನೆ ಮುಂದೆ ಕಟ್ಟಿದ್ದ ಟಗರುಗಳ ಮೇಲೆ ಮೂರು ಚಿರತೆ ದಾಳಿ ಮಾಡಿದ್ದರಿಂದ 9 ಟಗರು ಸಾವನ್ನಪ್ಪಿವೆ.
ತಾಂಡಾದ ಜಾಣನಾಯ್ಕ್ ಎಂಬುವವರು ತಾವು ಸಾಕಿದ್ದ 9 ಟಗರುಗಳನ್ನು ಮನೆ ಮುಂದೆ ಕಟ್ಟಿದ್ದರು. ರಾತ್ರಿ 1 ಗಂಟೆ ಸುಮಾರಿಗೆ ಮೂರು ಚಿರತೆಗಳು ಏಕಕಾಲಕ್ಕೆ ಟಗರುಗಳ ಮೇಲೆ ದಾಳಿ ಮಾಡಿವೆ. ಈ ವೇಳೆ ಮನೆ ಮುಂದೆ ಮಲಗಿದ್ದ ಜಾಣನಾಯ್ಕ್, ಸಂಗೀತಾಬಾಯಿ ದಂಪತಿ ಚಿರತೆಗಳನ್ನು ಕಂಡು ಮನೆ ಒಳಗೆ ಓಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆ ಮುಂದೆ ಕಟ್ಟಿದ್ದ 9 ಟಗರುಗಳನ್ನು ಸಾಯಿಸಿ, ಅವುಗಳಲ್ಲಿ ಎರಡನ್ನು ಹೊತ್ತೊಕೊಂಡು ಕಾಡಿನತ್ತ ಓಡಿ ಹೋಗಿವೆ.
ಒಂದು ಟಗರು 20 ಸಾವಿರ ರೂಪಾಯಿ ಹಾಗೂ ಉಳಿದ ಎಂಟು ಟಗರುಗಳು ಸುಮಾರು 15 ಸಾವಿರ ಬೆಲೆ ಬಾಳುತ್ತಿದ್ದವು ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದ ಗುಡೇಕೋಟೆ ವಲಯ ಅರಣ್ಯ ಅಧಿಕಾರಿ ಶ್ರೀಧರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜಾಣ ನಾಯ್ಕ್ ಹಾಗೂ ಸಂಗೀತಾಬಾಯಿ ಪ್ರತಿ ವರ್ಷ ಕಬ್ಬು ಕಡಿಯಲು ವಲಸೆ ಹೋಗುತ್ತಿದ್ದರು. ಆದರೆ ಕೋವಿಡ್ ನಿಂದ ಹ ಈ ವರ್ಷ ವಲಸೆ ಹೋಗುವುದು ಬೇಡ ಎಂದು ಹೇಳಿ ಟಗರು ಮರಿಗಳನ್ನು ಖರೀದಿ ಮಾಡಿ ಅವುಗಳನ್ನು ಸಾಕಿದ್ದರು. ಎಂದು ತಾಂಡಾದಲ್ಲಿಯೇ ಉಳಿದಿದ್ದರು.