ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಅಕ್ರಮ ಭೂಮಂಜೂರಾತಿ ಮಾಡಿದ ಪ್ರಕರಣದಲ್ಲಿ ಆಗಿನ ತಹಶೀಲ್ದಾರ್ ಜೆ.ಉಮೇಶ್ ಅವರನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಜೆ.ಉಮೇಶ್, ಸದ್ಯ ಕಾರವಾರದಲ್ಲಿ ಸೀಬರ್ಡ ನೌಕಾನೆಲೆಯ ಭೂಸ್ವಾಧೀನಾಧಿಕಾರಿಯಾಗಿದ್ದಾರೆ. ಕಡೂರು ತಾಲ್ಲೂಕಿನ ಉಳ್ಳಿನಾಗರು ಗ್ರಾಮದ ಸರ್ವೆ ನಂಬರ್ 43ರಲ್ಲಿ 5 ಎಕರೆ 4 ಗುಂಟೆ ಸರ್ಕಾರಿ ಜಮೀನನ್ನು ಹನುಮಂತಯ್ಯ ಬಿನ್ ಚಿಕ್ಕಣ್ಣ ಎಂಬುವರ ಹೆಸರಿಗೆ ಖಾತೆ ದಾಖಲಿ ನಂತರ ಪೌತಿ ಖಾತೆ, ದಾನಪತ್ರ, ಕ್ರಯಪತ್ರ ಮಾಡಲಾಗಿದೆ. ಇದು ನಿಯಮ ಬಾಹಿರವಾಗಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರ ಅನ್ವಯ ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಅವರು ಆ.12ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಿರಸ್ತೆದಾರ್ ನಂಜುಂಡಯ್ಯ, ಕಂದಾಯ ನಿರೀಕ್ಷಕ ಕಿರಣ್‌ಕುಮಾರ್ ಅವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಜೆ.ಉಮೇಶ್ ಅವರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಕಡೂರಿಗೆ ಕರೆತಂದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.