ಚನ್ನಪಟ್ಟಣ: ಅಂತ್ಯಕ್ರಿಯೆ ಕಾರ್ಯಕ್ಕೆ ತೆರಳುತ್ತಿದ್ದವರ ವಾಹನದ ಮೇಲೆ ಮರ ಮುರಿದು ಬಿದ್ದು ಎಂಟು ಮಂದಿ ಗಾಯಗೊಂಡಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಯಲಚಿಪಾಳ್ಯದಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಡನಕುಪ್ಪೆ ಗ್ರಾಮದಿಂದ ಎಂಟು ಮಂದಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮದ್ದೂರು ತಾಲ್ಲೂಕಿನ ಹೊಸಕೆರೆಹಳ್ಳಿಗೆ ಹೋಗುವಾಗ ಈ ಅಪಘಾತ ಉಂಟಾಗಿದೆ.
ಮರದ ಬೇರು ಒಣಗಿದ್ದರಿಂದ ಬುಡಸಮೇತ ವಾಹನದ ಮೇಲೆ ಬಿದ್ದಿದೆ. ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.