ಸರಾಸರಿ ನಾನು ದಿನಕ್ಕೆ ಐದು ಜನ ಗಂಡಸರ ಜೊತೆ ಮಲಗಲೇ ಬೇಕಿತ್ತು. ಅಂದರೆ ತಿಂಗಳಿಗೆ ನೂರೈವತ್ತು ಜನ ! ವರ್ಷಕ್ಕೆ ಸಾವಿರದ ಎಂಟುನೂರು ಜನ !! ನನ್ನ ಇಪ್ಪತೈದು ವರ್ಷಗಳ ವೇಶ್ಯಾ ವೃತ್ತಿಯಲ್ಲಿ ಹತ್ತಿರತ್ತಿರ ಅರ್ಧ ಲಕ್ಷ ಗಿರಾಕಿಗಳ ಜೊತೆಯಲ್ಲಿ ದೇಹವನ್ನು ಹಂಚಿಕೊಂಡಿದ್ದೇನೆ !!! ಅವರ್ಯಾರೂ ನನ್ನ ಪರಿಚಯದವರಲ್ಲ. ನೆಂಟರಿಷ್ಟರೂ ಅಲ್ಲ. ಎಲ್ಲರೂ ಅಪರಿಚಿತರೇ. ಅವರ್ಯಾರೂ ನನ್ನನ್ನು ನೋಡಲು ಹೂಗುಚ್ಚವನ್ನಾಗಲೀ, ಉಡುಗೊರೆಯನ್ನಾಗಲಿ ತಂದವರಲ್ಲ. ಬದಲಾಗಿ, ಹಾಸಿಗೆಯಲ್ಲಿ ಹೊಸ ಹೊಸ ಪ್ರಯೋಗದ ಬಗ್ಗೆ ವಿಕೃತ ಕಲ್ಪನೆಯೊಂದಿಗೆ ಬಂದವರು. ನನ್ನ ದೇಹವನ್ನು ಅಕ್ಷರಶಃ ಟಾಯ್ಲೆಟ್ ಥರ ಉಪಯೋಗಿಸಿ ಎದ್ದು ಹೋದವರು. ನನ್ನೆರೆಡು ಮಕ್ಕಳ ಎರಡು ಹೊತ್ತಿನ ಊಟಕ್ಕಾಗಿ ನಾನಿದನ್ನು ಮಾಡಲೇಬೇಕಿತ್ತು. ನ್ಯೂಯಾರ್ಕ್ ನ ಅಥೇನಾ ಫಿಲಂ ಫೆಸ್ಟಿವಲ್ ನ ಸಮಾರೋಪ ಸಮಾರಂಭದಲ್ಲಿ, ತನ್ನ ಬಗ್ಗೆಯೇ ಮಾಡಿದ ಸಾಕ್ಷ್ಯ ಚಿತ್ರಕ್ಕೆ ಪ್ರಶಸ್ತಿ ಸಂದ ಸಂದರ್ಭದಲ್ಲಿ ಅವಳು ಮಾತನಾಡುತ್ತಿದ್ದಳು. ಹೊರ ಪ್ರಪಂಚದಲ್ಲಿ ತೋರಿಸಿಕೊಳ್ಳಲಾಗದ, ತೀರಿಸಿಕೊಳ್ಳಲಾಗದ,ಸಿಟ್ಟುಗಳನ್ನೂ,ಮಾನಸಿಕ ವಿಕೃತಿಗಳನ್ನೂ ತಣಿಸುವ ಜಾಗವೆಂದೇ ತಿಳಿದಿದ್ದ ಹಸಿದ ವಿಟ ವೃಂದವದು. ಇಲ್ಲಿ, ಕಾಸು ಕೊಟ್ಟಿದ್ದೇನೆ ಎಂಬ ಒಂದೇ ಅಹಂನಿಂದ ನನ್ನ ಮೇಲೆ ಅಪರಿಮಿತ ದೌರ್ಜನ್ಯಗಳನ್ನೆಸಗಿದ ಗಿರಾಕಿಗಳನ್ನೂ ನೋಡಿದ್ದೇನೆ. “ಹದಿಮೂರು ಬಾರಿ ಇರಿತಕ್ಕೊಳಗಾಗಿದ್ದೇನೆ. ಐದು ಬಾರಿ ನನ್ನ ಮೇಲೆ ಗುಂಡಿನ ದಾಳಿಗಳಾಗಿವೆ. ಇದರಲ್ಲಿ ನನ್ನ ಖಾಸಗಿ ಅಂಗಗಳೂ ಹೊರತಾಗಿಲ್ಲ.” ಎಂದು ಕಣ್ಣೀರಿನ ಹನಿಗಳನ್ನು ಅನಾಮತ್ತು ಬೆರಳುಗಳಿಂದ ಒರೆಸುತ್ತಾ ಕಿರುನಗೆ ಬೀರುತ್ತಿದ್ದರೆ, ತುಂಬಿದ ಸಭಾಂಗಣದ ಎಲ್ಲಾ ಕಣ್ಣುಗಳೂ ಒದ್ದೆಯಾಗಿದ್ದವು.
ಇಪ್ಪತೈದು ವರ್ಷಗಳಲ್ಲಿ ಹಲವು ಬಾರಿ ತಪ್ಪಿಸಿಕೊಳ್ಳಲು ವಿಪಲ ಪ್ರಯತ್ನಗಳಾಗಿವೆ.ಆದರೆ ಪಿಂಪ್ ಗಳ ಕೈಗೆ ಒಮ್ಮೆ ಸಿಕ್ಕಿಬಿದ್ದರೆ ಅಲ್ಲಿಂದ ಹೊರಬರುವುದು ಅಸಾಧ್ಯದ ಮಾತೇ ಸರಿ. ಇದೆಲ್ಲದರ ನಡುವೆ ಕೊನೆಗೂ ಒಮ್ಮೆ ಈ ಪಾಪ ಕೂಪದಿಂದ ತಪ್ಪಿಸಿಕೊಳ್ಳುವ ಸುವರ್ಣಾವಕಾಶ ಬಂದೇ ಬಿಟ್ಟಿತು. ಒಮ್ಮೆ ಗಿರಾಕಿಯೊಬ್ಬ ಕಾರಿನಲ್ಲಿ ಅವನ ಜಾಗಕ್ಕೆ ಕರೆದೊಯ್ಯುತ್ತಿದ್ದಾಗ, ನನ್ನ ಸಹಕಾರ ಸಾಕಾಗಲಿಲ್ಲವೋ, ಅಥವಾ ಅವನ ಮಾನಸಿಕ ವಿಕೃತಿ ಸಕ್ರಿಯವಾಯಿತೋ, ಚಲಿಸುವ ಕಾರಿನ ಬಾಗಿಲು ತೆರೆದು ಜಾಡಿಸಿ ಒದ್ದಿದ್ದ ! ಕೆಳಗೆ ಬಿದ್ದ ನನ್ನ ಬಟ್ಟೆ ಕಾರಿನ ಬಾಗಿಲಿಗೆ ಸಿಕ್ಕಿಕೊಂಡು ಎಷ್ಟೋ ದೂರ ನನ್ನನ್ನು ಎಳೆದೊಯ್ದಿತ್ತ. ನನ್ನ ಎಡ ಭಾಗದ ಮುಖ ರಸ್ತೆಗೆ ಉಜ್ಜಿ ವಿಕಾರ ಮುಖಭಾವವನ್ನು ಮೂಡಿಸಿತ್ತು. ಇನ್ನು ಇವಳಿಂದ ಪ್ರಯೋಜನವಿಲ್ಲವೆಂದು ಭಾವಿಸಿ ಆ ಕರಾಳ ಜಗತ್ತು ನನಗೆ ಬಿಡುಗಡೆಯ ಭಾಗ್ಯವನ್ನು ಕರುಣಿಸಿತು ಎಂದು “ಬ್ರೆoಡಾ ” ಕಣ್ಣು ಹೊಡೆದು ನಗುತ್ತಾ,ಉಮ್ಮಳಿಸಿದ ನೋವನ್ನು ತಡೆದು ಕೊಂಡರೆ, ಸಭಾಂಗಣದಲ್ಲಿದ್ದ ಗಂಡಸರು ತಮ್ಮ ಹೆಂಡತಿಯರ ಮುಂಗೈ ಹಿಡಿದು ಸಮಾಧಾನ ಮಾಡಲು ಪ್ರಯತ್ನಿಸುತ್ತಿದ್ದರು……! ಹಾಸ್ಯ ಚಟಾಕಿ ಹಾರಿಸುವಲ್ಲಿ ಪರಿಣಿತಳಾದ ಬ್ರೆoಡಾ ಸನ್ಯಾಸಿನಿಯಂತೆ ಮಾತನಾಡುತ್ತಿದ್ದರೆ ಪ್ರೇಕ್ಷಕರು ಮಂತ್ರ ಮುಗ್ಧರಾದಂತೆ ಕುಳಿತಿದ್ದರು.ಅಳುತ್ತಾ, ನಗುತ್ತಾ ಹಾವಭಾವಗಳಲ್ಲಿ ತನ್ನ ಅಸಹಾಯಕತೆಯನ್ನು ತೋರಿಸುತ್ತಾ ಮುಂದುವರಿಸುತ್ತಾಳೆ ಅವಳು………….. ಅಪಘಾತವಾದ ಎಷ್ಟೋ ಹೊತ್ತು ಚಿಕಿತ್ಸೆಯೇ ಸಿಗದೇ ಡ್ರೆಸ್ಸಿಂಗ್ ರೂಮ್ನಲಲಿ ಹಾಗೇ ಕುಳಿತಿದ್ದೆ. ನನ್ನನ್ನು ನೋಡಿದ ಡಾಕ್ಟರ್ ಒಬ್ಬ ” ಓ ಇವಳಾ, ಇರಲಿ ಬಿಡು ಎಂದು ತಾತ್ಸಾರದಿಂದ ನೋಡಿದ್ದ. ಪ್ರತೀ ಬಾರಿ ನನಗೆ ಹೊಲಿಗೆ ಹಾಕಿ ಡ್ರೆಸ್ಸಿಂಗ್ ಮಾಡುತ್ತಿದ್ದದ್ದ ಇದೇ ಡಾಕ್ಟರ್.ಅಂತೂ ಎಷ್ಟೋ ಹೊತ್ತಾದಮೇಲೆ ಲೋಕಲ್ ಅನೆಸ್ತೀಶಿಯಾ ಕೂಡ ಕೊಡದೆ ಹೊಲಿಗೆ ಹಾಕಿದ್ದ ಭೂಪ…!ಡಾಕ್ಟರ್ ಎಂಬ ಗೌರವ ನನಗಿದ್ದರೆ, ಇದೊಂದು ಪೀಡೆ ಎನ್ನುವ ಅಸಡ್ಡೆ ಅವನಿಗೆ. ವಿರುದ್ಧ ದಿಕ್ಕಿನೆಡೆಗೆ ತಿರುಗಿದ ಎರಡು ಮಾನಸಿಕ ವೈರುದ್ಧಗಳ ಮಹಾ ಸಮಾಗಮವದು ! ಅವನು ಕೂಡ ಗಂಡಸೇ… ಗಂಡಸರೆಂದರೆ ವಾಕರಿಕೆ ಬರುವಂತಾಗಿತ್ತು ಆ ಹೊತ್ತಿಗೆ. ನಾನೇನು ಮಾಡಲಿ ಪ್ರತಿಯೊಬ್ಬ ಗಂಡಸಿನ ಕಣ್ಣುಗಳಲ್ಲಿ ವಿಟಪುರುಷನ ಚಹರೆಯೇ ಕಾಣುತ್ತಿತ್ತು. ಬಹುಶಃ ನಮ್ಮಪ್ಪ ಇದ್ದಿದ್ದರೆ ಅವನ ಬಗ್ಗೆಯೂ ಅದೇ ಅಸಹ್ಯ ಭಾವನೆ ಮೂಡುತ್ತಿತ್ತೇನೊ ಎಂದು ಮಗುವಿನಂತೆ ಅತ್ತೇಬಿಟ್ಟಳು ಬ್ರೆoಡಾ. “ಗಂಡಸಾಗಿ ಹುಟ್ಟಿದ್ದಕ್ಕೆ ಕ್ಷಮೆ ಇರಲಿ ಎಂಬಂತೆ ಸಭಾಂಗಣದಲ್ಲಿದ್ದ ಪುರುಷ ಸಂಕುಲ ಹೆಂಡತಿಯರ ಮುಂದೆ ಕಣ್ಣಲ್ಲೇ ಅಂಗಲಾಚಿದ್ದವು “….!!
ಇಂತಹ ನಿಕೃಷ್ಠ ಹಾಗೂ ರೋಚಕ ಬದುಕನ್ನ ಕಂಡ ಒಂದು ವ್ಯಕ್ತಿತ್ವದ ಬಗ್ಗೆ ಡಾಕ್ಯುಮೆಂಟೇಷನ್ ಮಾಡುವುದು ಸವಾಲಿನ ಕೆಲಸವೇ ಸರಿ. ಈ ಅಪೂರ್ವವಾದ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದವಳೂ ಕೂಡ ಹೆಣ್ಣೇ ಆಗಿದ್ದರಿಂದ ಬೇರಿನ ಮಟ್ಟದಿಂದ ಸುಳಿಯ ವರೆಗೂ ಇಡೀ ವಿಷಯ ಪರಿಣಾಮಕಾರಿಯೆನಿಸುತ್ತದೆ. ಭಾರತದ ಸಾಮಾಜಿಕ ಪೀಡನೆಯ ವಸ್ತುಗನ್ನಾಧರಿಸಿ ಈಗಾಗಲೇ ಎರಡು ಸಾಕ್ಷ್ಯ ಚಿತ್ರಗಳನ್ನು ಮಾಡಿರುವ ಈ ನಿರ್ದೇಶಕಿಯ ಹೆಸರು ” ಕಿಮ್ ಲಿಂಗೊನೊಟ್ಟೋ “. ಬ್ರೆoಡಾ ಜೀವನದ ಬಗ್ಗೆ ಅವಳ ಅಧ್ಯಯನ ಹಾಗೂ ಸಂಶೋಧನೆ ಸೋಜಿಗವನ್ನುoಟು ಮಾಡುತ್ತದೆ. ಪ್ರತಿ ಘಟನೆಯನ್ನು ನಿರ್ಭಡೆಯಿಂದ ಹೇಳಿಕೊಳ್ಳುವ ಬ್ರೆoಡಾ ಇನ್ನೂ ಅಚ್ಚರಿಯನ್ನುoಟು ಮಾಡುತ್ತಾಳೆ!! ಆ ಹೆಣ್ಣುಮಗಳ ಪೂರ್ಣ ಹೆಸರು ಬ್ರೆoಡಾ ಮೇಯರ್ಸ್ ಪೋವೆಲ್. ಆರು ತಿಂಗಳ ಹಸುಳೆಯಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿದ್ದ ಬ್ರೆoಡಾಗೆ, ನಾಲ್ಕೈದು ವರ್ಷದವಳಾಗಿದ್ದಾಗಲೇ ಲೈಂಗಿಕ ಕಿರುಕುಳ ಪ್ರಾರಂಭವಾಗಿತ್ತಂತೆ. ಕಡುಕುಡುಕಿ ಅಜ್ಜಿ,ಕುಡಿಯಲು ತನ್ನೊಟ್ಟಿಗೆ ಸ್ನೇಹಿತರನ್ನೂ ಮನೆಗೆ ಕರೆತರುತ್ತಿದ್ದಳಂತೆ. ಅವರಿಂದ ಬ್ರೆoಡಾಗೆ ಕರಾಳ ಜಗತ್ತಿನ ಪರಿಚಯ ಶುರುವಾಯ್ತಂತೆ. ಹದಿನಾಲ್ಕು ವರ್ಷ ಆಗುವಷ್ಟರಲ್ಲಿ ಕೇರಿಯ ಹುಡುಗರಿಂದ ಎರಡು ಮಕ್ಕಳಾದವೆಂದು ಯಾವುದೇ ಎಗ್ಗಿಲ್ಲದೆ ಹೇಳಿಕೊಳ್ಳುತ್ತಾಳೆ ಅವಳು!. ಮೊದಲ ಬಾರಿ ಕೇವಲ ನಾಲ್ಕು ಡಾಲರ್ ಬೆಲೆಯ ಟೂ ಪೀಸ್ ಉಡುಗೆ ತೊಟ್ಟು,ಅಗ್ಗದ ಪ್ಲಾಸ್ಟಿಕ್ ಚಪ್ಪಲಿ ಧರಿಸಿ,ಕಿತ್ತಳೆ ಬಣ್ಣದ ಲಿಪ್ಸ್ಟಿಕ್ ಹಾಕಿ,ಇಳಿಸಂಜೆ ರಸ್ತೆ ಬದಿಯಲ್ಲಿ ನಿಂತ ನೆನಪು. ಒಂದೇ ರಾತ್ರಿ ಐದು ಜನರೊಂದಿಗೆ ಡೇಟಿಂಗ್ ಮಾಡಿ ನಾನ್ನೂರು ಡಾಲರ್ ಗಳಿಸಿದ್ದೆ. ಎಲ್ಲಿಂದ ತಂದೆ ಎಂದು ಅಜ್ಜಿ ಕೇಳಲೂ ಇಲ್ಲ, ನಾನು ಹೇಳಲೂ ಇಲ್ಲ. ನಮ್ಮಮ್ಮನೂ ಹೀಗೇ ತರುತಿದ್ದಳೆಂದು ನನಗೆ ತಡವಾಗಿ ತಿಳಿಯಿತಷ್ಟೇ ಎನ್ನುತ್ತಾಳೆ. ವಯಸ್ಸು ಕಡಿಮೆ ಇದ್ದಷ್ಟೂ ಬೆಲೆ ಹೆಚ್ಚು ಎಂದು ನನಗೆ ತಿಳಿದದ್ದೂ ಕೂಡ ನಂತರದಲ್ಲಿ ಎಂದು ನಗುತ್ತಾಳೆ ಅವಳು.ಆರು ತಿಂಗಳು ಜೀವನ ಚೆನ್ನಾಗಿಯೇ ಇತ್ತು. ಹುಲ್ಲಿನ ಹಾಸಿನಿಂದ ಹಿಡಿದು ಸ್ಟಾರ್ ಹೋಟೆಲ್ನ ಸುಪ್ಪತ್ತಿಗೆಯವರೆಗೆ ಎಲ್ಲವನ್ನೂ ಅನುಭವಿಸಿಯಾಗಿತ್ತು. ಭೂಗತ ಮಾರುಕಟ್ಟೆಯಲ್ಲಿ ಎಲ್ಲರಿಗೂ ಕಣ್ಣಾಗಿಹೋದೆ.ಮುಂದೊಂದು ದಿನ ಪಿಂಪ್ ಗಳ ದಾಳಿಗೊಳಗಾಗಿ ದೈಹಿಕವಾಗಿ ನರಕ ದರ್ಶನವಾಯ್ತು. ಅಲ್ಲಿನ ಕೆಲವು ಘಟನೆಗಳನ್ನ ಮರೆಯಲೆತ್ನಿಸಿದಷ್ಟೂ ಎಷ್ಟೋ ದಿನಗಳು ದುಸ್ವಪ್ನವಾಗಿ ಕಾಡುತ್ತಲೇ ಇದ್ದವು.ನಂತರ ಪಿಂಪ್ ನಿಂದ ಪಿಂಪ್ ಗೆ ಕೈಬದಲಾವಣೆಯಾಗಿ ಪೂರ್ಣ ಮಟ್ಟದ ಪ್ರೊಫೆಷನಲ್ ಆದೆ ಎನ್ನುತ್ತಾಳೆ ನತದೃಷ್ಟೆ ಬ್ರೆoಡಾ.
ಅವಳ ವೃತ್ತಿ ಬದುಕು ಧಾರುಣವಾಗಿ ಅಂತ್ಯವಾದ ಮೇಲೆ “ಜೆನೆಸಿಸ್ ಹೌಸ್ ” ಎಂಬ ಸಮಾಜ ಸುಧಾರಣಾ ಸಂಘದ ಆಶ್ರಯದಲ್ಲಿ ಚೇತರಿಸಿಕೊಳ್ಳುತ್ತಾಳೆ. “ಎಡ್ವಿನ್ ಗೇಟ್ಲಿ ” ಸ್ಥಾಪಿಸಿದ ಈ ಸಂಸ್ಥೆ ಚಿಕಾಗೋ ನಗರದ ಸಂತ್ರಸ್ತ ಮಹಿಳೆಯರ ಆಶ್ರಯ ತಾಣ. ಬ್ರೆoಡಾಗೀಗ ಜ್ಞಾನೋದಯವಾಗಿದೆ. ಮುಂದಿನ ಅವಳ ಬದುಕು, ಅವಳಂತೆಯೇ ದೌರ್ಜನ್ಯಕ್ಕೀಡಾಗಿ ನೆಲೆ ಕಳೆದುಕೊಂಡ ಸಂತ್ರಸ್ತೆಯರ ಬೆಂಬಲವಾಗಿ ಸವೆಸಿದ ಅಮೋಘ ಸಾಧನೆಯಾಗಿ ದಾಖಲಾಗುತ್ತದೆ. “ಡ್ರೀಮ್ ಕ್ಯಾಚರ್ ” ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿಯಲ್ಲಿ ಬಲುದೊಡ್ಡ ಮಟ್ಟದ ಸುಧಾರಣೆಗಳನ್ನು ತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆಯುತ್ತಾಳೆ. ಅವಳೀಗ ಮಹಿಳಾ ಶಾಲಾ ಕಾಲೇಜುಗಳಿಗೆ ಭೇಟಿ ಕೊಡುತ್ತಾಳೆ. ಹರೆಯದ ಮತ್ತಿನಲ್ಲಿ ಏನೆಲ್ಲಾ ಅವಘಡಗಳಾಗುತ್ತವೆ, ಅದು ಏನೆಲ್ಲಾ ಅನಾಹುತಗಳಿಗೆ ಕಾರಣವಾಗಬಹುದೆಂದು ಮನಮುಟ್ಟುವಂತೆ ವಿವರಿಸಿ ಹೇಳುತ್ತಾಳೆ. ಜೈಲಿನ ಮಹಿಳಾ ಖೈದಿಗಳೊಂದಿಗೆ ಚರ್ಚಿಸುತ್ತಾಳೆ. ಸಾಮಾನ್ಯವಾಗಿ ಮಹಿಳೆಯರ ಅವರ ಬಾಯ್ ಫ್ರೆಂಡ್ಸ್ ಗಳ ಜೊತೆಯಲ್ಲಿ ಸೆಕ್ಸ್ ಮಾಡುವುದನ್ನೊ, ಅವರಿಂದ ಹೊಡೆತ ತಿನ್ನುವುದನ್ನೊ ನೋಡಿದ ಶೋಡಶಿ ಪುತ್ರಿಯರು ಆತ್ಮವಿಶ್ವಾಸವನ್ನೇ ಕಳೆದುಕೊಂಡು ಕುಡಿತದ ಹಾಗೂ ಡ್ರಗ್ಸ್ ದಾಸರಾಗುತ್ತಾರೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡ ಪಿಂಪ್ ಗಳು ಅವರನ್ನು ಹಿಡಿದು ಪಳಗಿಸುತ್ತಾರೆ ಎಂಬಂತ ಮಾಹಿತಿಗಳೆಲ್ಲವೂ ಅವಳ ಮಾತಿನಲ್ಲಿರುತ್ತವೆ.ಅವಳು ಚಿಕಾಗೋ ನಗರದ ಅಪಾಯಕಾರಿ ರಸ್ತೆಗಳಲ್ಲಿ ತಿರುಗುತ್ತಾಳೆ.ರಸ್ತೆಬದಿ ನಿಂತಿರುವ ಬೆಲೆವೆಣ್ಣುಗಳಿಗೆ ತಿಳಿಹೇಳುತ್ತಾಳೆ. ಅವರ ಮನವೊಲಿಸಲು ಸಾಧ್ಯವಾಗದಿದ್ದರೆ ಕನಿಷ್ಠ ಉಚಿತ ಕಾಂಡೊಮ್ ಗಳನ್ನು ಹಂಚುತ್ತಾಳೆ.ಈ ಸಾಕ್ಷ್ಯಚಿತ್ರದ ಆಸಕ್ತಿದಾಯಕ ವಿಷಯವೆಂದರೆ, ಅವಳು ಹೋದೆಡೆಯೆಲ್ಲಾ ಜೊತೆಯಲ್ಲಿ ಅವಳ ಮಾಜಿ ಪಿಂಪ್ ಹೋಮರ್ಸ್ ನನ್ನು ಜೊತೆಗೆ ಕರೆದೊಯ್ಯುತ್ತಾಳೆ.ಅವನೀಗ ಬ್ರೆoಡಾಳಿಂದ ನೈತಿಕ ಸುಧಾರಣೆಯನ್ನು ಕಂಡಿದ್ದಾನೆ. ಪಿಂಪ್ ಗಳು ಹೇಗೆಲ್ಲ ಹುಡುಗಿಯರನ್ನು ಟ್ರ್ಯಾಪ್ ಮಾಡುತ್ತಾರೆಂದು ಎಚ್ಚರಿಸುತ್ತಾನೆ. ಒಂದೊಮ್ಮೆ ಅವರ ಕೈಗೆ ಸಿಕ್ಕಿಹಾಕಿಕೊಂಡರೆ ಎಂತಹ ಕ್ರೂರ ಪರಿಸ್ಥಿತಿಗೆ ತಳ್ಳಲ್ಪಡುತ್ತಾರೆ ಎಂಬುದನ್ನು ವಿವರಿಸುತ್ತಾನೆ.ಅನಿವಾರ್ಯವಾಗೋ,ಆಕರ್ಷಣೆಗೆ ಒಳಗಾಗೋ, ಬದುಕನ್ನೇ ಕಳೆದುಕೊಂಡ ಸಾವಿರಾರು ಹೆಣ್ಣುಗಳ ಜೀವನದ ಪುನರನಿರ್ಮಾಣ ಕೆಲಸದಲ್ಲಿ ಈ ಸಂಸ್ಥೆ ಬಲು ದೊಡ್ಡ ಪಾತ್ರ ವಹಿಸಿದೆ.ಅಮೇರಿಕಾದಲ್ಲಿ ಪ್ರತಿ ವರ್ಷ ಒಂದು ಲಕ್ಷ ಮಹಿಳೆಯರು ಹಾಗೂ ಮಕ್ಕಳ ಕಳ್ಳಸಾಗಣಿಕೆ ನಡೆಯುತ್ತದೆ ಎಂಬ ಮಾಹಿತಿಯಿದೆ. ಮೂಲಭೂತ ವ್ಯವಸ್ಥೆಯಲ್ಲಿ ಸುಧಾರಣೆಯಾಗದೆ, ಕಾನೂನಾತ್ಮಕವಾಗಿ ಅದನ್ನು ತಡೆಗಟ್ಟುವುದು ಅಸಾಧ್ಯದ ಮಾತು. ಇಂಥ ಹೊತ್ತಿನಲ್ಲಿ ಬ್ರೆoಡಾ ಮತ್ತು ಅವಳ ಡ್ರೀಮ್ ಕ್ಯಾಚರ್ ಸಂಸ್ಥೆ ತುಂಬಾ ಪ್ರಸ್ತುತವೆನಿಸುತ್ತದೆ (ಗಹನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವಿದು – ಪ್ರಕಟಿಸಿದ ಪತ್ರಿಕೆಯ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಧನ್ಯವಾದಗಳು)
ಗಂಧರ್ವ ರಾಯರಾವುತ್.