ಬೆಂಗಳೂರು: ಸ್ಯಾಂಡಲ್ವುಡ್ನ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರ ಈ ವರ್ಷದ ಮೊದಲ ಸಿನಿಮಾ ರಿಲೀಸ್ಗೆ ಮುಹೂರ್ತ ನಿಗದಿಯಾಗಿದೆ. ‘ಘೋಸ್ಟ್’ ಸಿನಿಮಾ ಅಕ್ಟೋಬರ್ 19ರಂದು ಬಿಡುಗಡೆಯಾಗಲಿದೆ.
ಚಿತ್ರವು ವೆಸ್ಟರ್ನ್ ಸ್ಟೈಲ್ನಲ್ಲಿ ಇದ್ದು, ಮೂರ್ನಾಲ್ಕು ಶೇಡ್ಸ್ನಲ್ಲಿ ಶಿವರಾಜ್ಕುಮಾರ್ ಅವರು ಕಾಣಿಸಿಕೊಳ್ಳಲಿದ್ದಾರೆ. ತೆಲುಗು ಹಾಗೂ ತಮಿಳಿನಲ್ಲಿ ಸ್ವತಃ ಶಿವರಾಜ್ಕುಮಾರ್ ಅವರೇ ಡಬ್ಬಿಂಗ್ ಮಾಡಿರುವ ವಿಡಿಯೊವೊಂದನ್ನು ಶ್ರೀನ್ ಅಪ್ಲೋಡ್ ಮಾಡಿದ್ದು, ಅಭಿಮಾನಿಗಳನ್ನು ಇದು ಸೆಳೆದಿದೆ.
ಶ್ರೀನಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆಗಲಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಶ್ರೀನಿ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ‘ನೆರಳುಗಳು ಪಿಸುಗುಟ್ಟುತ್ತಿವೆ ಎಂದರೆ ಘೋಸ್ಟ್ ಬರುತ್ತಿದ್ದಾನೆ ಎಂದರ್ಥ’ ಎಂದಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಮಲಯಾಳಂನ ಖ್ಯಾತ ನಟ ಜಯರಾಮ್, ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್ ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಹೆಜ್ಜೆ ಇಡುತ್ತಿದ್ದಾರೆ. ಇದು ಶ್ರೀನಿ ನಿರ್ದೇಶನದ ಐದನೇ ಚಿತ್ರ. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ಮಾಸ್ತಿ ಹಾಗೂ ಪ್ರಸನ್ನ ಅವರ ಸಂಭಾಷಣೆ ಇದೆ. ಸತ್ಯಪ್ರಕಾಶ್, ದತ್ತಣ್ಣ, ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.