ಮೊನ್ನೆ ದಲಿತ ಸಮುದಾಯದ ಓರ್ವ ಸ್ನೇಹಿತರ ಒಂದು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗಿದ್ದೆ. ಆ ಕಾರ್ಯಕ್ರಮಕ್ಕೆ ಒಂದು ಕಾಲೇಜಿನ ಅಧ್ಯಾಪಕ ಮತ್ತು ಸಿಬ್ಬಂದಿ ವೃಂದ ಮನೆ ಮಾಲೀಕರನ್ನು ಅಭಿನಂದಿಸಲು, ಆ ಸಂತಸ ಕೂಟದಲ್ಲಿ ಪಾಲ್ಗೊಳ್ಳಲು ಬಂದಿತ್ತು. ನನ್ನ ಪರಿಚಯವನ್ನು ಮಾಡಿಕೊಂಡ ಅಲ್ಲಿ ಬಂದಿದ್ದ ಆ ಕಾಲೇಜಿನ ಸಿಬ್ಬಂದಿ ಮತ್ತು ಅಧ್ಯಾಪಕರ ವೃಂದ ಫೊಟೊ ಸೆಷನ್ ಗೆ ತೆರಳುತ್ತಿದ್ದಂತೆ ಅಲ್ಲಿ ಬಂದಿದ್ದ ಫೋಟೋಗ್ರಾಫರ್ ನನ್ನು ಕಂಡು ಆಶ್ಚರ್ಯ ಮತ್ತು ಖುಷಿ ವ್ಯಕ್ತಪಡಿಸತೊಡಗಿತು. ಅವನ ಜೊತೆ ತುಂಬಾ ಆತ್ಮೀಯವೆಂಬಂತೆ ಹರಟೆ ಆರಂಭಿಸಿದ ಆ ಗುಂಪು “ಲೋ ಎಲ್ಲೆಲ್ಲೂ ನೀನೇನಾ” ಎಂದು ಛೇಡಿಸಿತು. ಅವನು ಅಷ್ಟೇ ಖುಷಿಯಿಂದ ಅವರ ಫೊಟೊ ತೆಗೆದ. ಇದನ್ನೆಲ್ಲ ನೋಡುತ್ತಿದ್ದ ನಾನು ಈ ಫೋಟೋಗ್ರಾಫರ್ ಆ ಕಾಲೇಜಿನ ಎಲ್ಲಾ ಕಾರ್ಯಕ್ರಮಗಳಿಗು ಪರ್ಮನೆಂಟ್ ಫೊಟೊಗ್ರಾಫರ್ ಇರಬೇಕು ಎಂದುಕೊಂಡೆ. ಹಾಗೆ ಆ ಅಧ್ಯಾಪಕ ವೃಂದ ಹೊರಟ ನಂತರ ಆತನ ಬಳಿ ತೆರಳಿ “ಏನು ಆ ಕಾಲೇಜಿನ ಎಲ್ಲಾ ಕಾರ್ಯಕ್ರಮಗಳಿಗೂ ನೀವೇ ಫೊಟೊಗ್ರಾಫರ್ರಾ? ” ಎನ್ನುತ್ತಿದ್ದಂತೆ ಆತ “ಇಲ್ಲ ಸರ್, ಅವರೆಲ್ಲ ನಮ್ಮ ಸ್ಟಾಫು. ನಾನು ಅಲ್ಲಿ ಗೆಸ್ಟ್ ಫ್ಯಾಕಲ್ಟಿಯಾಗಿ ಕೆಲಸ ಮಾಡುತ್ತಿದ್ದೀನಿ ಎಂದ! ಅಂದರೆ ಆತ ಆ ಕಾಲೇಜಿನ ಅತಿಥಿ ಉಪನ್ಯಾಸಕ, ಸಂಬಳ 32 ಸಾವಿರ, ಬಿಡುವಿನ ಸಮಯದಲ್ಲಿ ಫೊಟೊಗ್ರಾಫರ್ ವೃತ್ತಿ! ತಕ್ಷಣ ನನಗೆ ಅತೀವ ಆನಂದವಾಯಿತು ಹಾಗೆ ನನ್ನ ಬಗ್ಗೆ ನನಗೆ ಬೇಸರವು ಆಯಿತು ಅವರ ಬಗ್ಗೆ ನಾನು ಹಾಗೆ ತಪ್ಪು ತಿಳಿದುಕೊಂಡೆನಲ್ಲ ಎಂದು. ಆದರೂ ಬಿಟ್ಟಿ ಸಲಹೆ ಕೊಡುವವನಂತೆ ” ನೀವ್ಯಾಕೆ ಒಂದು ಸ್ಟುಡಿಯೋ ಇಟ್ಕೊಬಾರ್ದು” ಎನ್ನುತ್ತಿದ್ದಂತೆ ಆತ “ಬಸ್ ಸ್ಟ್ಯಾಂಡ್ ಪಕ್ಕ ಸ್ಟುಡಿಯೋ ಇದೆಯಲ್ಲ ಅದು ನನ್ನದೆ ಸರ್” ಎಂದ. ನನಗಿನ್ನು ಕಸಿವಿಸಿಯಾಯಿತು. ತಕ್ಷಣ ಅವರ ಎಲ್ಲಾ ಉದ್ಯೋಗ ವಿವರ ಪಡೆದುಕೊಳ್ಳುತ್ತಿದ್ದಂತೆ ನನಗೆ ಅಕ್ಷರಶಃ ಖುಷಿ. ಯಾಕೆಂದರೆ ಒಂದೆಡೆ ಒಂದು ಕಾಲೇಜಿನ ಉಪನ್ಯಾಸಕ ಮತ್ತೊಂದೆಡೆ ಫೊಟೊಗ್ರಾಫರ್. ಅಧ್ಯಾಪಕ ವೃತ್ತಿ ಗೆಸ್ಟ್ ಮಾದರಿ. ಆದ್ದರಿಂದ ಸಂಬಳ ಸ್ವಲ್ಪ ತಡ ಆಗುತ್ತದಂತೆ ಆದರೆ ಫೊಟೊಗ್ರಾಫರ್ ವೃತ್ತಿಯಲ್ಲಿ ಒಂದೇ ದಿನಕ್ಕೆ 70 ಸಾವಿರ ರೂಪಾಯಿಯ ಆರ್ಥರ್! ಛಾಯಾಗ್ರಹಣದ ಎಲ್ಲಾ ಉಪಕರಣಗಳು ಅವರ ಬಳಿ ಇವೆ, ಸಾಲದ್ದಕ್ಕೆ ಉತ್ತಮ ಡಿಸೈನರ್! ಹೀಗೆ ಕೇಳುತ್ತಿದ್ದಂತೆ ಭೇಷ್ ಅನ್ನಿಸಿತು.
ಹೌದು, ದಲಿತ ಯುವ ಸಮುದಾಯ ಯುವಕ ಯುವತಿಯರು ಇಂದು ಯಾವುದೇ ಒಂದು ಉದ್ಯೋಗಕ್ಕೆ ಜೋತು ಬಿದ್ದು ಬಡತನದಲ್ಲಿ ಬದುಕುವುದು ತಪ್ಪು ಉತ್ತಮ ಸಂಬಳದ ಸರ್ಕಾರಿ ಕೆಲಸ ಸಿಕ್ಕರೆ ಸೇರಲಿ. ಈ ಅತಿಥಿ, ಗೌರವ ಈ ಮಾದರಿಯ ಕೆಲಸ ಅಂದಾಗ ಜೊತೆಗೆ ಒಂದೆರಡು ಅನ್ಯ ಉದ್ಯೋಗಗಳನ್ನು, ನಿತ್ಯ ಆದಾಯ ಬರುವ ಉದ್ಯೋಗ ಗಳನ್ನು ಮಾಡಲಿ. ಸಣ್ಣಪುಟ್ಟ ವ್ಯಾಪಾರ ವ್ಯವಹಾರ ಆ ಉಪನ್ಯಾಸಕರು ಮಾಡುತ್ತಿದ್ದ ಹಾಗೆ ಯಾವುದೇ ನಾಚಿಕೆ ಮುಜುಗರ ಇಟ್ಟುಕೊಳ್ಳದೆ ಮಾಡಲಿ. ಆಗ ನೋಡಿ ಸಮುದಾಯದ ಬಡತನ ಮೂಲೋತ್ಪಾಟನೆ ಆಗುತ್ತದೆ. ದಲಿತ ಸಮುದಾಯ ಆರ್ಥಿಕ ಶಕ್ತಿಯಲ್ಲಿ ಸ್ವಯಂ ಸ್ವಾವಲಂಬಿತನವನ್ನು ಸಾಧಿಸುತ್ತದೆ.