ರಾಮನಗರ:ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಗ್ರಾಮದಲ್ಲಿರುವ ಸರ್ಕಾರಿ ಬಾಲಮಂದಿರದಿಂದ ಮೂರು ದಿನಗಳ ಹಿಂದೆ ಮೂವರು ಬಾಲಕರು ತಪ್ಪಿಸಿಕೊಂಡಿದ್ದಾರೆ. ಈ ಕುರಿತು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯದ ಬಾಲಮಂದಿರದಲ್ಲಿದ್ದ 16 ವರ್ಷದೊಳಗಿನ ಈ ಬಾಲಕರನ್ನು ಇತ್ತೀಚೆಗೆ ವಂದಾರಗುಪ್ಪೆಗೆ ಸ್ಥಳಾಂತರಿಸಲಾಗಿತ್ತು. ಸೆ. 17ರಂದು ಬೆಳಿಗ್ಗೆ 8.30ಕ್ಕೆ ಮುಖ ತೊಳೆಯುವ ನೆಪದಲ್ಲಿ ರಕ್ಷಕ ಸಿಬ್ಬಂದಿ ಸಿದ್ದರಾಜು ಅವರ ಕಣ್ತಪ್ಪಿಸಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ.
ವಿಷಯ ಗೊತ್ತಾಗುತ್ತಿದ್ದಂತೆ, ಸುತ್ತಮುತ್ತಲಿನ ಸ್ಥಳಗಳಲ್ಲಿ ಹುಡುಕಾಡಿದರೂ ಬಾಲಕರು ಪತ್ತೆಯಾಗಿಲ್ಲ. ಬಾಲಮಂದಿರದಲ್ಲಿರುವ 37 ಮಕ್ಕಳನ್ನು ನೋಡಿಕೊಳ್ಳಲು ಹಗಲು ರಾತ್ರಿ ಮೂರು ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೂ, ಸಿಬ್ಬಂದಿ ನಿರ್ಲಕ್ಷ್ಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಬಾಲಮಂದಿರದ ಬಾಲಮಂದಿರದ ಅಧೀಕ್ಷಕ ಹರೀಶ್ ಕುಮಾರ್ ಎನ್. ದೂರಿನಲ್ಲಿ ತಿಳಿಸಿದ್ದಾರೆ.