Saturday, December 14, 2024
Homeಕಲ್ಯಾಣ ಕರ್ನಾಟಕಕಲಬುರ್ಗಿಭಾರಿ ಮಳೆ: ಕಾಗಿಣಾ ಸೇತುವೆ ಮುಳುಗಯವ ಭೀತಿ

ಭಾರಿ ಮಳೆ: ಕಾಗಿಣಾ ಸೇತುವೆ ಮುಳುಗಯವ ಭೀತಿ

ಕಲಬುರಗಿ: ಕಲಬುರಗಿ, ಚಿತ್ತಾಪುರ, ಕಾಳಗಿ ಹಾಗೂ ಚಿಂಚೋಳಿ ತಾಲ್ಲೂಕಿನಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಬಿರುಸಿನ ಮಳೆ ಸುರಿಯುತ್ತಿದೆ. ಇದರಿಂದಾಗಿ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ.

ಧಾರಾಕಾರ ಮಳೆ ಬರುತ್ತಿದ್ದರಿಂದ ಕಾಗಿಣಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ. ಚಿತ್ತಾಪುರ ತಾಲ್ಲೂಕಿನ ದಂಡೋತಿ ಹತ್ತಿರ ಇರುವಾ ಕಾಗಿಣಾ ನದಿ ಸೇತುವೆ ಮುಳುಗಡೆಯಾಗುವ ಭೀತಿ ಶುರುವಾಗಿದೆ. ನದಿ ಮೇಲ್ಭಾಗದ ಸೇಡಂ, ಚಿಂಚೋಳಿ, ಕಾಳಗಿ ತಾಲ್ಲೂಕುಗಳಲ್ಲಿ ಮಳೆಯಾಗಿ ಕಮಲಾವತಿ, ರೌದ್ರಾವತಿ, ಬೆಣ್ಣೆತೊರಾ ಚಿಕ್ಕ‌ನದಿಗಳ ಪ್ರವಾಹ ಕಾಗಿಣಾ ನದಿಗೆ ಸೇರುತ್ತವೆ. ಹೀಗಾಗಿ ಸೋಮವಾರ ಬೆಳಿಗ್ಗೆ ಕಾಗಿಣಾ ನದಿಯಲ್ಲಿ ಪ್ರವಾಹ ಹೆಚ್ಚಾಗುತ್ತಿದೆ.

ಸೋಮವಾರ ಬೆಳಿಗ್ಗೆ ಆರೂವರೆ ಗಂಟೆಯಿಂದ ಎಂಟೂವರೆ ಗಂಟೆಯವರೆಗೆ ಧಾರಾಕಾರ ಮಳೆ ಸುರಿದಿದೆ. ಹಳ್ಳಕೊಳ್ಳಗಳು, ನಾಲಾಗಳು ಪ್ರವಾಹದಿಂದ ತುಂಬಿ ಹರಿಯುತ್ತಿವೆ. ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಅಡವಿಯ ನೀರು ಗ್ರಾಮಕ್ಕೆ ನುಗ್ಗಿ ಬಂದು ಅವಾಂತರ ಸೃಷ್ಟಿಸಿದೆ. ಮಳೆ ನೀರಿನಿಂದ ಗ್ರಾಮದ ರಸ್ತೆಗಳು ಜಲಾವೃತವಾಗಿ, ರಸ್ತೆಗಳ ಮೇಲೆ ಮೊಣಕಾಲು ಮಟ್ಟದವರೆಗೆ ನೀರು ಹರಿದಿವೆ. ಗ್ರಾಮ ಪಂಚಾಯಿತಿ ಕಟ್ಟಡದ ಆವರಣಕ್ಕೆ ಮಳೆ ನೀರು ನುಗ್ಗಿದೆ. ಚಿತ್ತಾಪುರಕ್ಕೆ ಹೋಗುವ ರಸ್ತೆ ಜಲಾವೃತವಾಗಿ ಜನರು ತೀವ್ರ ತೊಂದರೆ ಅನುಭವಿಸಿದರು.

ಕಾಳಗಿ ತಾಲ್ಲೂಕಿನ ಅರೆಜಂಬಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನೀರು ನಿಂತಿದೆ. ಚಿಂಚೋಳಿ ತಾಲ್ಲೂಕು ಪಟಪಳ್ಳಿ ಹಳೆ ಊರು ಹೊಸ ಊರಿನ ಮಧ್ಯೆ ಸೇತುವೆ ಮೇಲಿನಿಂದ ಪ್ರವಾಹದ ನೀರು ಹರಿಯುತ್ತಿದ್ದು, ಎರಡು ಊರುಗಳ ಮಧ್ಯೆ ಸಂಪರ್ಕ ಕಡಿತವಾಗಿದೆ. ಜಾತ್ರೆಗೆ ಮಳೆ ಅಡ್ಡಿ: ಕಲ್ಯಾಣ ಕರ್ನಾಟಕ ಪ್ರದೇಶದ ಹೆಸರಾಂತ ದೇವಸ್ಥಾನ, ಅಪಾರ ಭಕ್ತರ ಆರಾಧ್ಯದೈವ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಕಾಳಗಿ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ಗುಡ್ಡದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಮಳೆ ಅಡ್ಡಿಯಾಗಿದೆ.


ಪ್ರತಿವರ್ಷ ಶ್ರಾವಣ ಮಾಸದ ನಡುವಿನ ಸೋಮವಾರ ಜರುಗುವ ಈ ದೇವಸ್ಥಾನದ ಜಾತ್ರೆಗೆ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಸಾಗರೋಪಾದಿಯಲ್ಲಿ ಹರಿದುಬರುತ್ತಾರೆ. ಸಾಯಂಕಾಲ 4.30ಕ್ಕೆ ನೆರವೇರುವ ಪಲ್ಲಕ್ಕಿ ಉತ್ಸವದ ಮುನ್ನವೇ ಬೆಳಿಗ್ಗೆ ಸುತ್ತಲಿನ ಗ್ರಾಮಗಳ ಭಕ್ತರು ಕಾಲ್ನಡಿಗೆಯೊಂದಿಗೆ ಆಗಮಿಸಿ ರೇವಣಸಿದ್ದೇಶ್ವರರ ಗದ್ದುಗೆಗೆ ವಿಶೇಷ ಪೂಜೆ ಮಾಡಿ ನೈವೇದ್ಯ ಸಲ್ಲಿಸುತ್ತಾರೆ. ಭಜನೆಯೊಂದಿಗೆ ಬಂದು ಭಕ್ತಿಭಾವ ಮೆರೆಯುತ್ತಾರೆ. ಆದರೆ ಈ ದಿನ ಬೆಳಿಗ್ಗೆ 6ಕ್ಕೆ ಶುರುವಾದ ಧಾರಾಕಾರ ಮಳೆ 9 ಗಂಟೆಯಾದರೂ ಜನರನ್ನು ಹೊರಗಡೆ ಓಡಾಡಲು ಬಿಡುತ್ತಿಲ್ಲ. ಗುಡ್ಡಕ್ಕೆ ಬಂದು ಹೋಗಲು, ಸಿದ್ಧತೆ ಮಾಡಿಕೊಳ್ಳಲು ಮಳೆ ಅಡಚಣೆಯಾಗಿದೆ. ದಿಕ್ಕು ತೋಚದ ಭಕ್ತರು ಸದ್ಯ ಮಳೆ ನಿಲ್ಲುವಿಕೆ ಎದುರು ನೋಡಿ ರೇವಣಸಿದ್ದೇಶ್ವರ ದರ್ಶನಕ್ಕೆ ಕಾಯುತ್ತಿದ್ದಾರೆ.