ಭಾವೈಕ್ಯ ಭಾರತವನ್ನು ಕಟ್ಟಬೇಕು. ಜನರ
ಮನಸ್ಸನ್ನು ಕಟ್ಟಬೇಕು. ಮುರುಘಾಮಠ ಭಾವೈಕ್ಯ ಕೇಂದ್ರವಾಗಿ
ಬೆಳೆದಿದೆ. ನಾವು ವಿಶ್ವಭಾವನೆ ಬೆಳೆಸಿಕೊಳ್ಳಬೇಕು ಎಂದು ಶ್ರೀ
ಬಸವಪ್ರಭು ಸ್ವಾಮಿಗಳು ಹೇಳಿದರು.
ನಗರದ ಬುರುಜಿನಹಟ್ಟಿಯಲ್ಲಿ ಮಂಗಳವಾರ ಶ್ರಾವಣಮಾಸದ ವಿಶೇಷ
ಚಿಂತನ ನಿತ್ಯಕಲ್ಯಾಣ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.
ಎಲ್ಲರೂ ನನ್ನವರು ಎಂಬ ಭಾವನೆ ಬೇಕು. ದಾರ್ಶನಿಕರು ಮಾನವ
ಕುಲದ ಉದ್ಧಾರಕರು. ಅವರನ್ನು ಜಾತಿಗೆ ಸೀಮಿತಗೊಳಿಸಬಾರದು. ಎಲ್ಲ
ದಾರ್ಶನಿಕರು ವಿಶ್ವಪ್ರೇಮವನ್ನು ಬೋಧನೆ ಮಾಡಿದ್ದಾರೆ. ಧರ್ಮ
ಕೂಡಿಸುವ ಕೆಲಸ ಮಾಡುತ್ತದೆ ಎಂದರು.
ರಾಣೇಬೆನ್ನೂರು ವಿರಕ್ತಮಠದ ಶ್ರೀ ಗುರುಬಸವ ಸ್ವಾಮಿಗಳು
ಮಾತನಾಡಿ, ಸರ್ವ ಜನಾಂಗದ ಶಾಂತಿ ತೋಟ ಎಂದರೆ ಶ್ರೀ ಮುರುಘಾಮಠ.
ಸಮಾಜದಲ್ಲಿರುವ ಸಂಕುಚಿತ ಮನೋಭಾವವನ್ನು ತೊಲಗಿಸಲು
ಶ್ರೀಮಠ ನಿರಂತರವಾಗಿ ಶ್ರಮಿಸುತ್ತ ಬಂದಿದೆ. ಅನ್ನ, ಆಶ್ರಯ, ಅಕ್ಷರ
ದಾಸೋಹವನ್ನು ಮಾಡುತ್ತ ಬಂದಿದೆ. ಭಾವೈಕ್ಯತೆಯ ಜಾಗೃತಿ
ಮೂಡಿಸುತ್ತಿದೆ. ನಾವೆಲ್ಲರೂ ಒಂದೇ ಎಂಬ ಮನೋಭಾವ ಇರಬೇಕು.
ಉತ್ತಮ ಹೃದಯವಂತಿಕೆ ಮುಖ್ಯ. ಮನುಷ್ಯನಲ್ಲಿ ಅತಿಯಾದ ಆಸೆ
ಇದ್ದಾಗ ಸಂಕುಚಿತ ಭಾವನೆ ಬರುತ್ತದೆ. ಇರುವ ನಾಲ್ಕು ದಿನದೊಳಗೆ
ಒಳ್ಳೆಯ ಕೆಲಸ ಮಾಡಿ ಹೋಗಬೇಕು. ಉತ್ತಮ ಸಂಸ್ಕಾರದಿಂದ
ಮಕ್ಕಳನ್ನು ಬೆಳೆಸಬೇಕು. ಆರೋಗ್ಯ ಸಂಪತ್ತನ್ನು
ವೃದ್ಧಿಸಿಕೊಳ್ಳಬೇಕು. ಧರ್ಮದ ಸಂಪತ್ತಿನಿಂದ ಎಲ್ಲ ಸಂಪತ್ತು
ನಮ್ಮಲ್ಲಿ ಬರುತ್ತದೆ ಎಂದರು.
ಪರಮೇಶ್ವರಪ್ಪ ಕುದರಿ ಮಾತನಾಡಿ, ಸಂಕುಚಿತ ದೃಷ್ಟಿ ವಿಶಾಲ ದೃಷ್ಟಿ
ಇರುತ್ತದೆ. ಯಾರೂ ಸಹ ಪೂರ್ವಾಗ್ರಹ ಪೀಡಿತರಾಗಬಾರದು. ನಾವು
ತೆರೆದ ಕಣ್ಣಿನಿಂದ ಸಮಾಜವನ್ನು ನೋಡಬೇಕು. ಸಂಕುಚಿತ
ದೃಷ್ಟಿಯಿಂದ ವಿರೋಧಿಗಳು ಹೆಚ್ಚಾಗುತ್ತಾರೆ. ವೈರತ್ವವನ್ನು
ರೂಢಿಸಿಕೊಳ್ಳಬಾರದು. ನಾನು ನನ್ನದು ಎಂಬ ಭಾವನೆ ಇರಬಾರದು.
ಇಂದು ಆಧ್ಯಾತ್ಮದ ಮನಸ್ಸು ಬೇಕಿದೆ ಎಂದು ಹೇಳಿದರು.
ಮಾಜಿ ನಗರಸಭಾಧ್ಯಕ್ಷ ಹೆಚ್. ಮಂಜಪ್ಪ, ಕೆ.ಸಿ. ನಾಗರಾಜು
ಮಾತನಾಡಿದರು. ಕಾರ್ಯಕ್ರಮ ದಾಸೋಹಿಗಳಾದ ಶ್ರೀರಾಮ್,
ಪರಮೇಶ್ವರ, ಶ್ರೀಮತಿ ಶಾರದಮ್ಮ, ಮಲ್ಲಿಕಾರ್ಜುನ್ ಇದ್ದರು.
ಉಮೇಶ್ ಪತ್ತಾರ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಟಿ.ಪಿ. ಜ್ಞಾನಮೂರ್ತಿ
ಸ್ವಾಗತಿಸಿ, ನಿರೂಪಿಸಿದರು.