ಚಿತ್ರದುರ್ಗ: ಕೆಎಸ್ಆರ್ ಟಿಸಿ ಬಸ್ ಹಾಗೂ ಲಾರಿ ನಡುವೆ ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಸೋಮವಾರ ನಸುಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಬೆಂಗಳೂರಿನ ಪಾರ್ವತಮ್ಮ (45), ರಾಯಚೂರಿನ ಮಸ್ಕಿಯ ರಮೇಶ್ (40) ಗುರುತು ಪತ್ತೆಯಾಗಿದೆ. ಇನ್ನೂ ಇಬ್ಬರ ಗುರುತು ಪತ್ತೆಯಾಗಬೇಕಿದೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಎಸ್ಆರ್ ಟಿಸಿ ಬಸ್ ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು. ಹಿರಿಯೂರು ತಾಲ್ಲೂಕನ ಗೊಲ್ಲಹಳ್ಳಿಯ ಬಳಿ ಹೆದ್ದಾರಿ ಬದಿಯಲ್ಲಿ ನಿಲುಗಡೆಯಾಗಿದ್ದ ಲಾರಿಗೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿದೆ. ಬಸ್ ಎಡಭಾಗದ ಕಿಟಕಿಯ ಬಳಿ ಕುಳಿತುಕೊಂಡಿದ್ದ ಪ್ರಯಾಣಿಕರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಸ್ ನಲ್ಲಿ 51 ಪ್ರಯಾಣಿಕರು ಇದ್ದರು ಎಂದು ಐಮಂಗಲ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.