ಮಂಗಳೂರು: ಕಳವು ಮಾಡಿದ ಸೆಂಟ್ರಿಂಗ್ ಶೀಟ್‌ಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಆತನಿಂದ 120 ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳು ಮತ್ತು 3 ಸೆಟ್ ಕಬ್ಬಿಣದ ಕಂಬಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಡುಬಿದಿರೆ ತೋಡಾರಿನ ಇಲಿಯಾಸ್ ಅಲಿಯಾಸ್ ಮೊಹಮ್ಮದ್ ಇಲಿಯಾಸ್ (23 ) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉಳ್ಳಾಲ ಠಾಣೆಯ ಪಿಎಸ್‌ಐ ಸಂತೋಷ್ ಕುಮಾರ್ ಡಿ. ಅವರು ಠಾಣಾ ಸಿಬ್ಬಂದಿಗಳೊಂದಿಗೆ ಶನಿವಾರ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪಿಲಿಕೂರು ಕಡೆಯಿಂದ ಕೆ.ಸಿ.ರೋಡ್ ಕಡೆಗೆ ರಿಡ್ಜ್ ಕಾರು ಮತ್ತು ಪಿಕಪ್ ವಾಹನಗಳು ತೆರಳಿದ್ದವು. ತಪಾಸಣೆಗಾಗಿ ಅವುಗಳನ್ನು ನಿಲ್ಲಿಸಿದಾಗ ರಿಡ್ಜ್ ಕಾರಿನಲ್ಲಿದ್ದ ಇಬ್ಬರು ಇಳಿದು ಓಡಿ ಹೋದರು. ಪಿಕಪ್ ವಾಹನದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ.
ವಾಹನದಲ್ಲಿ 120 ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳು ಮತ್ತು ಕಬ್ಬಿಣದ ಕಂಬಗಳ 3 ಬಾಕ್ಸ್ ಗಳು ಪತ್ತೆಯಾದವು’ ಎಂದು ಪೊಲೀಸರು ತಿಳಿಸಿದ್ದಾರೆ. ‘ಕಬ್ಬಿಣದ ಶೀಟ್‌ಗಳನ್ನು ಕೊಲ್ಯದಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಆ.7ರಂದು ರಾತ್ರಿ ಹಾಗೂ ಕಬ್ಬಿಣದ ಕಂಬಗಳನ್ನು ಸುಮಾರು ಒಂದೂವರ ತಿಂಗಳ ಹಿಂದೆ ಪನೀರು ಎಂಬಲ್ಲಿಂದ ಕದ್ದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದನ. ಕಾರಿನ್ನೊಂದಿಗೆ ಭಾಗಿಯಾಗಿದ್ದಾರೆ ಎಂದೂ ಆತ ಒಪ್ಪಿಕೊಡಿದದಾನೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ‘ಕದ್ದ ಸೊತ್ತುಗಳನ್ನು ಕೂಡಲೇ ಮಾರಾಟ ಮಾಡಿದರೇ ಸಿಕ್ಕಿಬೀಳಬಹುದು ಎಂಬ ಭಯದಿಂದ, ಅವುಗಳನ್ನು ಪಿಲಿಕೂರಿನ ನಿರ್ಜನ ಪ್ರದೇಶದಟ್ಟಿ ಅಡಗಿಸಿಟ್ಟಿದ್ದರು. ಅವುಗಳನ್ನು ಮಾರಾಟ ಮಾಡಲು ಕೊಂಡೊಯ್ಯುವಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ವಶಪಡಿಸಿಕೊಂಡ 120 ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳ ಮೌಲ್ಯ ₹ 2.50 ಲಕ್ಷ, ಹಾಗೂ ಕಬ್ಬಿಣದ ಕಂಬಗಳ ಮೌಲ್ಯ ₹ 1.25 ಲಕ್ಷ, ಪಿಕಪ್ ವಾಹನದ ಮೌಲ್ಯ ₹ 3 ಲಕ್ಷ ಹಾಗೂ ರಿಡ್ಜ್ ಕಾರಿನ ಮೌಲ್ಯ ₹ 3 ಲಕ್ಷ ಆಗಬಹುದು ಎಂದು ಅಂದಾಜಿಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರ. ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್ ಸಂದೀಪ್.ಜಿ.ಎಸ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಸಂತೋಷ್ ಕುಮಾರ್ ಡಿ., ಕೃಷ್ಣ ಕೆ.ಎಚ್., ಶೀತಲ್ ಅಲಗೂರ್, ಧನರಾಜ್ ಎಸ್., ಎ.ಎಸ್.ಐ ಶೇಖರ ಗಟ್ಟಿ ಮತ್ತು ಸಿಬ್ಬಂದಿ ರಂಜಿತ್ ಕುಮಾರ್, ಅಶೋಕ್, ವಿನೋದ್ ಕುಮಾರ್, ಮಂಜುನಾಥ್, ಆನಂದ ಬಡಗಿ, ರಿಯಾಜ್ ಭಾಗವಹಿಸಿದ್ದರು.