ಚಂದ್ರನಲ್ಲಿ ಶಿವಶಕ್ತಿ ಪಾಯಿಂಟ್: ಮೋದಿ ಬೆಂಗಳೂರು: ಭಾರತದ ಚಂದ್ರಯಾನ-3ರ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಎಂದು ಪ್ರಧಾನಿ ನರೇಂದ್ರ ಮೋದಿ ನಾಮಕರಣ ಮಾಡಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಕಮಾಂಡಿಂಗ್ ಸೆಂಟರ್‌ಗೆ ಶನಿವಾರ ಬೆಳಿಗ್ಗೆ ಭೇಟಿನೀಡಿ ಚಂದ್ರಯಾನ-3ರ ಯಶಸ್ಸಿಗಾಗಿ ವಿಜ್ಞಾನಿಗಳನ್ನು ಅಭಿನಂದಿಸಿ ಮಾತನಾಡಿದರು. ನಮ್ಮ ಚಂದ್ರಯಾನ-3ರ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್ ಎಂದು ನಾಮಕರಣ ಮಾಡಲು ಬಯಸುತ್ತೇನೆʼ ಎಂದರು. ಶಿವನಲ್ಲಿ ಮಾನವ ಕಲ್ಯಾಣದ ಸಂಕಲ್ಪ ಇದೆ. ಶಕ್ತಿಯಲ್ಲಿ ಆ ಸಂಕಲ್ಪವನ್ನು ಅನುಷ್ಠಾನಕ್ಕೆ ತರುವ ಬದ್ಧತೆಯನ್ನು ಕಾಣಬಹುದು. ಶಿವಶಕ್ತಿ ಪಾಯಿಂಟ್ ಭಾರತ ಮಾತ್ರವಲ್ಲ ಇಡೀ ಜಗತ್ತಿಗೆ ಪ್ರೇರಣೆಯ ಸ್ಥಳವಾಗಲಿದೆ. ಅದು ಹೊಸ ತಲೆಮಾರಿನ ಜನರಲ್ಲಿ ಬಾಹ್ಯಾಕಾಶಚ ವಿಜ್ಞಾನದ ಕುರಿತ ಅಧ್ಯಯನ ಮತ್ತು ಸಂಶೋಧನೆಗೆ ಪ್ರೇರಣೆ ನೀಡಲಿದೆ ಎಂದು ಹೇಳಿದರು. ನಾಲ್ಕು ವರ್ಷಗಳ ಹಿಂದೆ ಭಾರತವು ಕೈಗೊಂಡಿದ್ದ ಚಂದ್ರಯಾನ-2 ಕೊನೆಯ ಹಂತದಲ್ಲಿ ವಿಫಲವಾಗಿತ್ತು. ಚಂದ್ರಯಾನ-2 ಪತನಗೊಂಡಿದ್ದ ಸ್ಥಳಕ್ಕೂ ನಾಮಕರಣ ಮಾಡಲು ನಿರ್ಧರಿಸಿದ್ದೆವು. ಆದರೆ, ಅದೊಂದು ನೋವಿನ ಸಂದರ್ಭವಾಗಿತ್ತು ಎಂದರು. ಚಂದ್ರಯಾನ- 2 ಪತನಗೊಂಡಿದ್ದ ಸ್ಥಳವನ್ನು ತಿರಂಗಾ ಪಾಯಿಂಟ್ ಎಂದು ಹೆಸರಿಸುತ್ತೇವೆ. ಅದು ಯಾವ ವೈಫಲ್ಯವೂ ಅಂತಿಮವಲ್ಲ. ಸಾಧನೆಯ ಹೊಸ ಹೆಜ್ಜೆ ಆರಂಭವಾಗುವುದು ವೈಫಲ್ಯದ ಸ್ಥಳದಿಂದಲೇ ಎಂಬುದನ್ನು ಸೂಚಿಸಲಿದೆ ಎಂದು ಪ್ರಧಾನಿ ತಿಳಿಸಿದರು. ನೀವೆಲ್ಲರೂ ಅಭೂತಪೂರ್ವ ಸಾಧನೆ ಮಾಡಿದ್ದೀರಿ. ನಿಮ್ಮೆಲ್ಲರ ಕಠಿಣ ಪರಿಶ್ರಮ, ಬದ್ಧತೆ ಮತ್ತು ನಿರಂತರ ಪ್ರಯತ್ನದ ಫಲವಾಗಿ ಭಾರತವು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಸಾಧನೆಗಾಗಿ ಮನಸ್ಪೂರ್ವಕವಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ನಿಮ್ಮ ಈ ಸಾಧನೆಯು ಭಾರತದ ಹೊಸ ತಲೆಮಾರಿನ ಜನರಲ್ಲಿ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶದ ಕುರಿತ ಅಧ್ಯಯನದ ಆಸಕ್ತಿಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.
ಮೇಕ್ ಇನ್ ಇಂಡಿಯಾ ಯೋಜನೆಯನ್ನು ನೀವು ಚಂದ್ರನವರೆಗೂ ತಲುಪಿಸಿದ್ದೀರಿ. ಭಾರತದ ತಿರಂಗಾ ಈಗ ಚಂದ್ರನನ್ನು ತಲುಪಿದೆ. ಈ ಸಾಧನೆಯನ್ನು ತಮ್ಮದೇ ಎಂಬಂತೆ ದೇಶದ ಜನರು ಸಂಭ್ರಮಿಸಿದ್ದಾರೆ. ಇಂತಹ ಕ್ಷಣಗಳನ್ನು ನಿರ್ಮಿಸಿದ ಇಸ್ರೊ ವಿಜ್ಞಾನಿಗಳು, ತಂತ್ರಜ್ಞರು, ಎಂಜಿನಿಯರ್‌ಗಳು ಸೇರಿದಂತೆ ಚಂದ್ರಯಾನ-3ಕ್ಕಾಗಿ ದುಡಿದ ಎಲ್ಲರಿಗೂ ಸಲ್ಯೂಟ್ ಮಾಡಲು ಬಯಸುತ್ತೇನೆ ಎಂದರು. ಬಾಹ್ಯಾಕಾಶದ ಕುರಿತ ಜ್ಞಾನವು ಭಾರತದಲ್ಲಿ ಶತಮಾನಗಳ ಕಾಲದಿಂದಲೂ ಅಂತರ್ಗತವಾಗಿತ್ತು. ದೇಶವು ಗುಲಾಮಗಿರಿಯಲ್ಲಿದ್ದ ಕಾಲದಲ್ಲಿ ಅದು ನೇಪಥ್ಯಕ್ಕೆ ಸರಿದಿತ್ತು. ಸ್ವಾತಂತ್ರ್ಯದ ಕಾಲದಲ್ಲಿ ಹೊರಬಂದು, ಸಾಧನೆಗೆ ವೇದಿಕೆ ಒದಗಿಸಿದೆ. ಇದು ಹೊಸ ಭಾರತ. ಹೊಸ ಶಕ್ತಿಸ, ಹೊಸ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿರುವ ಭಾರತ ಎಂದು ಹೇಳಿದರು.