Saturday, December 14, 2024
Homeಕಲ್ಯಾಣ ಕರ್ನಾಟಕಬೀದರ್ಕ್ರೇನ್ ನಲ್ಲಿ ಎತ್ತಾಕಿಕೊಂಡು ಹೋದ ಕಾರಲ್ಲಿತ್ತು 118 ಕೆ.ಜಿ.ಗಾಂಜಾ

ಕ್ರೇನ್ ನಲ್ಲಿ ಎತ್ತಾಕಿಕೊಂಡು ಹೋದ ಕಾರಲ್ಲಿತ್ತು 118 ಕೆ.ಜಿ.ಗಾಂಜಾ


ಬೀದರ್: ಪೊಲೀಸರನ್ನು ಕಂಡು ಕಾರಲ್ಲಿದ್ದ ಇಬ್ಬರು ಇಳಿದು ಕಾರ್ ಲಾಕ್ ಮಾಡಿ ಪರಾರಿಯಾದರು. ಕಾರನ್ನು ಕ್ರೇನ್ ಮೂಲಕ ಎತ್ತಿಕೊಂಡು ಪೊಲೀಸ್ ಠಾಣೆಗೆ ತಂದು ಬಲವಂತವಾಗಿ ಲಾಕ್ ಓಪನ್ ಮಾಡಿ ನೋಡಿದಾಗ ಅದರಲ್ಲಿತ್ತು 118 ಕೆ.ಜಿ. ಗಾಂಜಾ !

ಬೀದರ್ ಸಮೀಪದ ರಾಷ್ಟ್ರೀಯ ಹೆದ್ದಾರಿ 65ರ ಮಂಗಲಗಿ ಟೋಲ್ ಪ್ಲಾಜಾ ಬಳಿ ಪೊಲೀಸರು ನಡೆಸಿದ ಕಾರ್ಯಾಚರಣೆ ಇದು. ಕಾರಲ್ಲಿ ಗಾಂಜಾ ಸಾಗಾಟವಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಬಂದತತು. ಚಿಟಗುಪ್ಪ ಹಾಗೂ ಮನ್ನಾಏಖೇಳ್ಳಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ 65ರ ಮಂಗಲಗಿ ಟೋಲ್ ಪ್ಲಾಜಾ ಬಳಿ ತೆಲಂಗಾಣ ಕಡೆಯಿಂದ ಬರುತ್ತಿದ್ದ ಕಾರು ನಿಲುಗಡೆ ಮಾಡುವಂತೆ ಕೈಸನ್ನೆ ಮಾಡಿದ್ದಾರೆ. ಕಾರಿನವರು ದೂರದಲ್ಲೇ ನಿಂತು, ಯೂ ಟರ್ನ್ ಮಾಡಿಕೊಂಡಿದ್ದಾರೆ. ಪೊಲೀಸರು ಹೆದ್ದಾರಿಯಲ್ಲಿ‌ ಮನ್ನಾಏಖೇಳ್ಳಿ ವರೆಗೆ ಬೆನ್ನಟ್ಟಿದ್ದಾರೆ. ರಸ್ತೆ ಬದಿ ಕಾರು ನಿಲ್ಲಿಸಿ ಅದರೊಳಗಿದ್ದ ಇಬ್ಬರು ಆರೋಪಿಗಳು ಕಾರ್ ಲಾಕ್ ಮಾಡಿ ಓಡಿ ಹೋಗಿದಾರೆ.‌ ಪೊಲೀಸರು ಫೈರಿಂಗ್ ಎಚ್ಚರಿಕೆ ಕೊಟ್ಟರೂ ಕ್ಯಾರೇ ಅನ್ನದೇ ಓಡಿದ್ದಾರೆ. ಹೆದ್ದಾರಿಯಲ್ಲಿ ಜನಸಂಚಾರ ಇದ್ದಿದ್ದರಿಂದ ಪೊಲೀಸರು ಫೈರಿಂಗ್ ಮಾಡಿಲ್ಲ. ಲಾಕ್ ಆಗಿದ್ದ ಕಾರನ್ನು ಕ್ರೇನ್ ಮೂಲಕ ಠಾಣೆಗೆ ಒಯ್ದು ಪರಿಶೀಲಿಸಿದ್ದಾರೆ. ಅದರಲ್ಲಿ 1.18 ಕೋಟಿ ಮೌಲ್ಯದ 118 ಕೆ.ಜಿ. ಮೌಲ್ಯದ ಗಾಂಜಾ ಪತ್ತೆಯಾಗಿದೆ. 8 ಲಕ್ಷ ಮೌಲ್ಯದ ಕಾರು ಸಹಿತ ಜಪ್ತಿ ಮಾಡಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ತೆಲಂಗಾಣದಿಂದ ಮಹಾರಾಷ್ಟ್ರದ ಕಡೆಗೆ ಗಾಂಜಾ ಸಾಗಿಸುತ್ತಿದ್ದರು. ಕಾರು ಕೂಡ ಮಹಾರಾಷ್ಟ್ರದ ಪಾಸಿಂಗ್ ಹೊಂದಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಚನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ‌ ಇದುವರೆಗೆ ಒಟ್ಟು ₹13 ಕೊಟಿಗೂ ಅಧಿಕ ಮೌಲ್ಯದ 1,200 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 65 ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಇದು ಅಕ್ರಮ ಚಟುವಟಿಕೆಗಳ ಪ್ರಮುಖ ಮಾರ್ಗವಾಗಿದೆ. ಹಾಗಾಗಿ ಹೆದ್ದಾರಿಯಲ್ಲಿ ಗಸ್ತು ಹೆಚ್ಚಿಸಲಾಗಿದೆ. ಟೋಲ್ ಪ್ಲಾಜಾ ಬಳಿ ಪೊಲೀಸರ ನಿಯೋಜಿಸಲಾಗಿದೆ. ಇಂಟೆಲಿಜೆನ್ಸ್ ಬಲಪಡಿಸಲಾಗಿದೆ. ನೆರೆ ರಾಜ್ಯಗಳ ಪೊಲೀಸರೊಂದಿಗೆ ಸತತ ಸಂಪರ್ಕದಲ್ಲಿ ಇರಲಾಗುತ್ತಿದೆ ಎಂದು ತಿಳಿಸಿದರು. ಹುಮಾನಾಬಾದ್ ಎಎಸ್ಪಿ ಶಿವಾಂಶು ರಜಪೂತ, ಚಿಟಗುಪ್ಪ ಠಾಣೆಯ ಸಿಪಿಐ ಮಹೇಶಗೌಡ ಪಾಟೀಲ, ಮನ್ನಾಏಖೇಳ್ಳಿ ಪಿಎಸ್ಐ ಬಸವರಾಜ ಚಿತಕೋಟಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಡ್ ಕಾನ್ ಸ್ಟೆಬಲ್ ಗಳಾದ ಸುನೀಲಕುಮಾರ, ಸಂಜಯ ಪಾಟೀಲ, ಕಾನ್ ಸ್ಟೆಬಲ್ ಗಳಾದ ರಾಜರೆಡ್ಡಿ, ಸಂಜುಕುಮಾರ, ಸಂದೀಪ ಪಾಲ್ಗೊಂಡಿದ್ದರು.