ಮೈಸೂರು: ಕನ್ನಡ ಚಿತ್ರರಂಗದ ಅಕ್ಷರ ಮಾಂತ್ರಿಕ, ನುಡಿ ಭಂಡಾರ ಹಂಸಲೇಖ ಅವರು ಈ ಬಾರಿಯ ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮಂಗಳವಾರ ಬೆಳಿಗ್ಗೆ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಕಾರ್ಡ್‌ಗೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು. ನಾಡಹಬ್ಬವೆಂದೇ ಜಗದ್ವಿಖ್ಯಾತ ಆಗಿರುವ ಮೈಸೂರು ದಸರವನ್ನು ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸಲಿದ್ದಾತೆ ಎಂದು ಮಾಹಿತಿ ನೀಡಿದರು.
ಬುಧವಾರ ಬೆಳಿಗ್ಗೆ 11ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ. 1.10 ಕೋಟಿ ಫಲಾನುಭವಿಗಳಿಗೆ ಈ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ತಲುಪಲಿದೆ ಎಂದರು. ನಮ್ಮ ಪಕ್ಷ ಹಾಗೂ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಆಗದು. ಜಾರಿಗೆ ತಂದರೆ ರಾಜ್ಯದ ಬೊಕ್ಕಸ ದಿವಾಳಿ ಆಗುತ್ತದೆ ಎಂದು ಬಿಜೆಪಿ ಹಾಗೂ ಪ್ರಧಾನಿ ಸಹ ಟೀಕಿಸಿದ್ದರು. ಆದರೆ ನಾವು ಅದನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದ್ದೇವೆ. ಈ ಯೋಜನೆಗಳಿಗೆ ಇಷ್ಟು ಮೊತ್ತವನ್ನು ವ್ಯಯಿಸಿದ ರಾಜ್ಯ ದೇಶದಲ್ಲಿ ಮತ್ತೊಂದಿಲ್ಲ ಎಂದು ಅವರು ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಉಪಸ್ಥಿತರಿದ್ದರು.