ಬೆಂಗಳೂರು : ಎಂಜಿನಿಯರ್ ಗಳು ದೇಶದ, ಸಮಾಜದ ನಿರ್ಮಾತೃಗಳು. ಸಮಾಜವನ್ನು-ದೇಶವನ್ನು ಪ್ರಗತಿಯ ದಿಕ್ಕಿನಲ್ಲಿ ರೂಪಿಸುವವರು ಎಂಜಿನಿಯರ್ ಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಕರ್ನಾಟಕ ರಾಜ್ಯ ಇನ್ಸ್ ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಆಯೋಜಿಸಿದ್ದ 56 ನೇ ಎಂಜಿನಿಯರಿಂಗ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಎಂಜಿನಿಯರ್ಸ್ ದಿನ ಕೂಡ ಹೌದು. ವಿಶ್ವ ಪ್ರಜಾಪ್ರಭುತ್ವ ದಿನವೂ ಹೌದು. ಈ ಎರಡರ ಉದ್ದೇಶವೂ ಕೂಡ ಉತ್ತಮ ಸಮಾಜದ ನಿರ್ಮಾಣವೇ ಆಗಿದೆ. ಸರ್.ಎಂ.ವಿಶ್ವೇಶ್ವರಯ್ಯ ಬಹಳ ದೊಡ್ಡ ಎಂಜಿನಿಯರ್. ಇವರು ಮೈಸೂರು ರಾಜರ ಬಳಿ ದಿವಾನರಾಗಿದ್ದ ಕಾರಣದಿಂದಲೇ ಮೈಸೂರಿನ ಅಭಿವೃದ್ಧಿಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ ಎಂದರು.
ವಿಶ್ವೇಶ್ವರಯ್ಯ ಅವರು ಮುಂದಿನ ಸಮಾಜ ಹೇಗಿರಬೇಕು ಎನ್ನುವ ಗ್ರಹಿಕೆ ಮತ್ತು ದೂರದರ್ಶಿತ್ವವನ್ನು ಹೊಂದಿದ್ದರು. ಈ ಕಾರಣಕ್ಕೇ ಭಾರತ ರತ್ನಕ್ಕೆ ಅರ್ಹರಾದರು ಎಂದು ಮೆಚ್ವುಗೆ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕರ್ನಾಟಕ ರಾಜ್ಯ ಇನ್ಸ್ ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.