ಚಾಮರಾಜನಗರ: ಹನೂರು ಸಮೀಪದ ಬಿ.ಗುಂಡಾಪುರ ಗ್ರಾಮದಲ್ಲಿ ಗುರುವಾರ ಶವಸಂಸ್ಕಾರಕ್ಕೆ ಮೃತದೇಹವನ್ನು ತೆಗೆದುಕೊಡು ಹೋಗುತ್ತಿದ್ದ ಸದರ್ಭದಲ್ಲಿ ಹೆಜ್ಜೇನು ದಾಳಿ ಮಾಡಿದ್ದರಿಂದ 10 ಮಂದಿ ಅ್ವಸ್ಥಗೊಂಡಿದ್ದಾರೆ.
ಏಳು ಮಂದಿ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿ.ಗುಂಡಾಪುರ ಗ್ರಾಮದ ಜಾನಪದ ಕಲಾವಿದ ದೊಡ್ಡಮಲ್ಲಯ್ಯ ಅವರು ನಿಧನರಾಗಿದ್ದರು. ಗುರುವಾರ ಮಧ್ಯಾಹ್ನ ಹೊತ್ತಿಗೆ ಗ್ರಾಮದ ಸಮೀಪವಿರುವ ರುದ್ರಭೂಮಿಗೆ ಶವ ಸಂಸ್ಕಾರಕ್ಕೆ ತೆರಳುತ್ತಿದ್ದ ವೇಳೆ ಹೆಜ್ಜೇನುಗಳು ಹಠಾತ್ ದಾಳಿ ಮಾಡಿವೆ. ದಾಳಿಗೊಳಗಾದವರೆಲ್ಲರೂ ವಯೋವೃದ್ಧರು.
ಹೆಜ್ಜೇನಿನ ದಾಳಿಯಿಂದ ಅಸ್ವಸ್ಥಗೊಂಡಿದ್ದವರನ್ನು ನಿವೃತ್ತ ಯೋಧ ಮಹಾದೇವ್ ಮತ್ತು ಯುವಕರಾದ ಮುದ್ದುಮಲ್ಲಯ್ಯ (ಸುನೀಲ್), ಮನು, ಮಹೇಂದ್ರ ತಮ್ನ ವಾಹನದಲ್ಲಿ ಸಮೀಪದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹತ್ತು ಜನರ ಪೈಕಿ ಮೂವರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಏಳು ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಪೈಕಿ ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಲ್ಕು ದಿನಗಳ ಹಿಂದೆಯಷ್ಟೇ ತಾಲ್ಲೂಕಿನ ಕೊಂಗರಹಳ್ಳಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಹೆಜ್ಜೇನುಗಳ ದಾಳಿಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಒಬ್ಬರು ಮೃತಪಟ್ಟಿದ್ದರು.