ಚಿತ್ರದುರ್ಗ: ಆಟವಾಡುವಾಗ ಹೊಲಿಗೆ ಯಂತ್ರಕ್ಕೆ ಕೈ ಸಿಲುಕಿ ಗಾಯಗೊಂಡ ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಒಯ್ದಾಗ ಅಲ್ಲಿ ನೀಡಿದ ಚುಚ್ಚುಮದ್ದಿನ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ಚಿಕ್ಕಜಾಜೂರು ಸಮೀಪದ ಹೊಸಹಳ್ಳಿಯ ಸುನೀತಾ- ಮಾಲತೇಶ ದಂಪತಿ ಪುತ್ರ ಚಿರಾಯಿ (7) ಮೃತಪಟ್ಟ ಬಾಲಕ. ಚಿಕ್ಕಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ವಿಜಯಮ್ಮ ವಿರುದ್ಧ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಚಿರಾಯಿ ಮನೆಯಲ್ಲಿದ್ದ ಬಟ್ಟೆ ಹೊಲಿಯುವ ಯಂತ್ರದಲ್ಲಿ ಗಾಯ ಮಾಡಿಕೊಂಡಿದ್ದ. ಪೋಷಕರು ಚಿಕ್ಕಜಾಜೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಬಾಲಕನಿಗೆ ನೋವು ನಿವಾರಕ ಚುಚ್ಚುಮದ್ದು ನೀಡಿದ ಶುಶ್ರೂಷಕಿ ವಿಜಯಮ್ಮ ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು. ಹೊಳಲ್ಕೆರೆ ಪಟ್ಟಣ ತಲುಪುವ ವೇಳೆಗೆ ಬಾಲಕನಿಗೆ ವಾಂತಿಯಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದಾನೆ. ಬಳಿಕ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ. ಪೋಷಕರು ನೀಡಿದ ದೂರಿನ ಆಧಾರದ ಮೇರೆಗೆ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.