Saturday, December 14, 2024
Homeಸಮಾಚಾರ ನೋಟಇತಿಹಾಸನವನ್ನು ರಕ್ತದಲ್ಲಿ ಬರೆದ ಧರ್ಮಗಳು

ಇತಿಹಾಸನವನ್ನು ರಕ್ತದಲ್ಲಿ ಬರೆದ ಧರ್ಮಗಳು

“ಮನುಷ್ಯನ ಇತಿಹಾಸದಲ್ಲಿ ಭಗವಾನ್ ಬುದ್ಧನ ಬೌದ್ಧ ಧರ್ಮ ಒಂದನ್ನು ಬಿಟ್ಟರೆ ಮಿಕ್ಕೆಲ್ಲ ಧರ್ಮಗಳೂ ತಮ್ಮ ಇತಿಹಾಸವನ್ನು ರಕ್ತದಲ್ಲಿ ಬರೆದುಕೊಂಡಿವೆ.

ಕ್ರಿಶ್ಚಿಯನ್ ಧರ್ಮ ಸಾಮ್ರಾಜ್ಯಶಾಹಿ ವಿಸ್ತರಣೆಯ ಕಾಲದಲ್ಲಿ ತಾವು ಆಕ್ರಮಿಸಿದ ಹೊಸ ಹೊಸ ಭೂಖಂಡಗಳಲ್ಲಿನ ಬೇರೆ ಬೇರೆ ಬುಡಕಟ್ಟುಗಳನ್ನು ಮೂಲೋತ್ಪಾಟನೆ ಮಾಡಿದ ಬಗೆಯನ್ನು ಯೋಚಿಸಿ. ಹೆಚ್ಚೇನು, ಎರಡು ಮಹಾಯುದ್ಧಗಳು ನಡೆದಿದ್ದು ಕ್ರಿಶ್ಚಿಯನ್ನರ ನಡುವೆಯೇ.

ಇಸ್ಲಾಂಗಂತೂ ದಂಡಯಾತ್ರೆಗಳ ಇತಿಹಾಸವೇ ಇದೆ. ಧರ್ಮಯುದ್ಧವೆಂದು ರಕ್ತಪಾತವನ್ನು ಪವಿತ್ರವಾಗಿ ಪರಿಗಣಿಸುತ್ತಾರೆ. ಇರಾನ್ ಇರಾಕ್ ಯುದ್ಧ ಸಹ ಒಂದೇ ಧರ್ಮಕ್ಕೆ ಸೇರಿದ ಶಿಯಾ-ಸುನ್ನಿಗಳ ಹೊಡೆದಾಟ.

ಹಿಂದೂಧರ್ಮ ಬೇರೆ ದೇಶಗಳ‌ ಮೇಲೆ ಯುದ್ಧಕ್ಕೆ ಹೋಗಿ ಪೌರುಷ ಪ್ರಸಾರ ಮಾಡಲಿಲ್ಲವಾದರೂ ಈ ದೇಶದೊಳಗೇ ಅಸ್ಪೃಶ್ಯತೆ, ಸ್ತ್ರೀ ಪ್ರತ್ಯೇಕತೆ, ಸತಿಪದ್ಧತಿ, ಸ್ತ್ರೀಯರ ಹೀನಾಯ ಪರಿಸ್ಥಿತಿ ಹೀಗೆ ಪ್ರತಿಯೊಂದು ಅನೀತಿಯನ್ನು ಅವಲಂಬಿಸಿ ಬೆಳೆದುಕೊಂಡು ಬಂದಿದೆ.

ನಾವು ಈಗ ಧರ್ಮಗುರುಗಳೂ, ಧಾರ್ಮಿಕ ಮುಖಂಡರೂ ಹೇಳುವ ಧರ್ಮಗ್ರಂಥಗಳ‌ ಡಿಕ್ಷನರಿ ಅರ್ಥವನ್ನು ನಂಬೋಣವೋ? ಮನುಷ್ಯನ ಇತಿಹಾಸದಿಂದ, ಅವನ ನಿರಂತರ ಕ್ರಿಯಾವಳಿಗಳ ವರ್ತನೆಯಿಂದ ಹೊಮ್ಮುವ ಅರ್ಥವನ್ನು ನಂಬೋಣವೋ? ಎಲ್ಲ ಧರ್ಮಗಳ ಹಿಂಬಾಲಕರೂ ತಮ್ಮ ಗ್ರಂಥಗಳ ಭಾಷೆಗೆ ಆಗಿರುವ ಭೀಕರ ಅರ್ಥಪಲ್ಲಟವನ್ನು ಒಪ್ಪಿಕೊಳ್ಳಲು ಹಿಂದೆಗೆಯುತ್ತಿದ್ದಾರೆ. ಈ ದ್ವಂದ್ವವನ್ನು ಅವರು ಒಪ್ಪಿಕೊಂಡ ದಿನ ಎಲ್ಲ ಮಸೀದಿ, ಚರ್ಚು, ರಾಮಮಂದಿರಗಳೂ ಉರುಳಿ ನಗಣ್ಯವಾಗಿ, ಆಕಾಶದ ಅಡಿಯ ವಿಸ್ತಾರ ಅನಂತ ಶೂನ್ಯ ಮಹಾನ್ ದೇಗುಲವಾಗುತ್ತದೆ.

ಇಪ್ಪತ್ತನೆಯ ಶತಮಾನದ ಮಾನವನಿಗೆ ಈ ಎಲ್ಲ ಧರ್ಮಗ್ರಂಥಗಳ ಸಂದೇಶ ಒಂದೇ ‘ನೀನೊಬ್ಬ ಮೂರ್ಖ’ ಎಂದು.”

-ಕೆ.ಪಿ. ಪೂರ್ಣಚಂದ್ರ ತೇಜಸ್ವಿ (‘ಲಂಕೇಶ್ ಪತ್ರಿಕೆ’ ನವೆಂಬರ್ 25, 1990)