ಏಸೋಪನ ಒಂದು ಕತೆ. ಮುಂಜಾನೆ ಜರಿಯೊಂದು ನಡೆದು ಹೋಗುತ್ತಿತ್ತು. ಮುಂಜಾನೆಯ ನಡಿಗೆ ಅದಕ್ಕೆ ಮುದ ನೀಡುವ ದೈನಂದಿನ ವ್ಯಾಯಾಮ. ಒಂದು ದಿನ ಹೀಗೆ ನಡೆದು ಹೋಗುತ್ತಿದ್ದ ಜರಿಯನ್ನು ಕಪ್ಪೆಯೊಂದು ನೋಡಿತು. ಕಪ್ಪೆಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಮತ್ತೆ ಮತ್ತೆ ಕಣ್ಣು ಮಿಟಕಿಸಿ ಜರಿಯನ್ನ ನೋಡಿತು. ಅಬ್ಬಬ್ಬಾ, ನೂರು ಕಾಲುಗಳು! ಹೇಗೆ ನಿಭಾಯಿಸುತ್ತದೆ? ನಡಿಗೆಯಲ್ಲಿ ಯಾವ ಕಾಲು ಮೊದಲು, ಯಾವ ಕಾಲು ನಂತರ? ಒಂದು, ಎರಡು, ಮೂರು, ನಾಲ್ಕು… ನೂರು ಕಾಲುಗಳು. ನಡೆಯುವಾಗ ಎಣಿಕೆ ಮರೆತರೆ? ಕಾಲುಗಳು ತೊಡರಿಸಿ ಬೀಳುವುದಿಲ್ಲವೇ? ಜರಿಯನ್ನೇ ಕೇಳಿಬಿಡುವ.
ಕಪ್ಪೆ ಆತುರದಿಂದ ಜರಿಯತ್ತ ಧಾವಿಸಿತು. ಕುಣಿಯುತ್ತ, ಜಿಗಿಯುತ್ತಾ ಬಂದ ಕಪ್ಪೆ, ಸರಸರನೆ ಸಾಗುತ್ತಿದ್ದ ಜರಿಯನ್ನು ನಿಲ್ಲಿಸಿ ಕೇಳುತ್ತದೆ. “ಅಂಕಲ್, ನಿಮ್ಮನ್ನು ಮುಂಜಾನೆಯ ನಡಿಗೆಯಲ್ಲಿ ನಿಲ್ಲಿಸಬಾರದಿತ್ತು. ಆದರೆ ಉತ್ತರ ಸಿಗದ ತಾತ್ವಿಕ ಪ್ರಶ್ನೆಯೊಂದು ನನ್ನ ಮನದಲ್ಲಿ ಮೂಡಿದೆ. ಯಕಶ್ಚಿತ್ ಕಪ್ಪೆ ನಾನು. ನನ್ನ ಪ್ರಶ್ನೆಗೆ ನೀವು ಮಾತ್ರ ಉತ್ತರ ನೀಡಬಲ್ಲಿರಿ” ಎಂದಿತು. ನಿನ್ನನ್ನು ಕಾಡುತ್ತಿರುವ ಪ್ರಶ್ನೆ ಯಾವುದೆಂದು ಜರಿ ಕೇಳಿತು. ಕಪ್ಪೆ ವಿವರಿಸಿತು. ಜರಿ, ನಿನಗೆ ನೂರು ಕಾಲುಗಳು. ನಡಿಗೆಯಲ್ಲಿ ಎಲ್ಲಾ ಕಾಲುಗಳನ್ನು ಏಕ ಕಾಲಕ್ಕೆ ಹೇಗೆ ನಿಭಾಯಿಸುವೆ?
ಅಯ್ಯೋ! ನಾನಿದರ ಬಗ್ಗೆ ಯೋಚಿಸಿಯೇ ಇರಲಿಲ್ಲ. ಒಮ್ಮೆಯೂ ಇರುವ ಕಾಲುಗಳನ್ನ ಎಣಿಸಿರಲಿಲ್ಲ. ನೀನೊಬ್ಬ ಮಹಾತ್ಮ. ಗಣಿತಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ಎಂದು ಜರಿ ಕಪ್ಪೆಯನ್ನು ಹೊಗಳಿತು. ಜರಿ ನೂರು ಕಾಲುಗಳು ಮೇಳೈಸುವ ತನ್ನ ವಿಸ್ಮಯದ ನಡಿಗೆಯನ್ನು ಚಿತ್ರಿಸಿಕೊಳ್ಳತೊಡಗಿತು. ಮರುಕ್ಷಣವೇ ಜರಿ ತೊಡರಿಸಿ ಬಿತ್ತು. ನೆಲಕ್ಕುರುಳಿದ್ದ ಜರಿ – ಮುಂದೆಂದೂ ಈ ರೀತಿಯ ಪ್ರಶ್ನೆಗಳನ್ನ ಕೇಳಬೇಡ. ನಿನ್ನ ತತ್ವಜ್ಞಾನ ನಿನಗೆ ಮಾತ್ರ ಸೀಮಿತವಾಗಿರಲಿ. ನನ್ನ ಇಡೀ ಜೀವನ ಇವಾವುದೇ ಗೊಂದಲಗಳಿಲ್ಲದೆ ನಿಭಾಯಿಸಿದ್ದೇನೆ. ನಾನೇ ಅಲ್ಲ ಕೋಟ್ಯಂತರ ಜರಿಗಳು ನಿರಾಳವಾಗಿ ಹಾಗೆ ಬದುಕಿವೆ. ಯಾರೊಬ್ಬರೂ ನನ್ನ ಹಾಗೆ ಬಿದ್ದು ನಗೆಪಾಟಲಿಗೆ ಗುರಿಯಾಗಿಲ್ಲ. ನಿನ್ನ ಪ್ರಶ್ನೆ ನನ್ನ ತಲೆಯಲ್ಲಿ ಹುಟ್ಟಿ ಹಾಕಿರುವ ಸಂಶಯವನ್ನು ನಾನು ತೊರೆಯದಿದ್ದರೆ ಮತ್ತೆಂದೂ ನಾನು ಸಹಜವಾಗಿ ನಡೆಯಲಾರೆ ಅನಿಸುತ್ತೆ. ಎಲವೋ ಮೂರ್ಖ ಈ ಪ್ರಶ್ನೆಯಿಂದ ನಾನು ಮುಕ್ತಿ ಪಡೆಯುವುದಾದರು ಹೇಗೆಂದು ಜರಿ ಕಪ್ಪೆಯನ್ನು ತರಾಟೆಗೆ ತೆಗೆದುಕೊಂಡು, ಈ ಪ್ರಶ್ನೆಯಿಂದ ಮುಕ್ತಿ ಪಡೆಯುವುದು ಹೇಗೆಂದು ಜರಿ ಕೇಳಿತು. ಮುಕ್ತಿಯ ಮಾರ್ಗ ನನಗೆ ತಿಳಿಯದು. ನೀನು ಅನುಭವಸ್ತ, ಹಿರಿಯ ಜರಿ. ದಿನನಿತ್ಯ ನಡೆಯುವೆ. ನಿನ್ನ ಬಳಿ ಉತ್ತರವಿಲ್ಲದಿದ್ದರೆ ಈ ಬಡ ಕಪ್ಪೆ ಏನು ತಾನೇ ಮಾಡೀತು ಎಂಬ ಉತ್ತರವನ್ನ ಕಪ್ಪೆ ನೀಡಿತು.
ಜರಿಗೆ ಮುಂದೇನಾಯಿತು ನನಗೆ ತಿಳಿಯದು. ಆದರೆ ಕಪ್ಪೆಯ ಪ್ರಶ್ನೆಯಿಂದ ಅದರ ಇಡೀ ಬದುಕೇ ದುಸ್ತರವಾಗಿರುಬಹುದು. “ನನ್ನದು ನೂರು ಕಾಲುಗಳು. ನಾನು ಸರಿಯಾದ ಕಾಲನ್ನ ಮುಂದಿಡುತ್ತಿದ್ದೇನೆಯೇ?” ಎಂಬ ಪ್ರಶ್ನೆ ಅದರ ಮನದಲ್ಲಿ ಪದೇ ಪದೆ ಉದ್ಭವಿಸಿ ನಡಿಗೆ ಅಸಾಧ್ಯವೆನಿಸಿರಬಹುದು. ಬದುಕಿಗೆ ಅದರದೇ ನೂರು ದಾರಿಗಳಿವೆ. ಲೈಫ್ ಹ್ಯಾಸ್ ಇಟ್ಸ್ ಓನ್ ವೆಯ್ಸ್ ! ಎಲ್ಲವನ್ನೂ ನೀವೇ ನಿಭಾಯಿಸ ಹೊರಟರೆ ಬದುಕನ್ನ ಹಾಳು ಮಾಡಿಕೊಳ್ಳುವಿರಿ. ಬದುಕಿಗೆ ಸಿಗಬೇಕಾದ ಸ್ವಾಂತಂತ್ರ್ಯ ನೀಡಿ. ಪ್ರೀತಿಗೆ ಸ್ವಾತಂತ್ರ್ಯ ನೀಡಿ. ಅಚಲ ಸಿದ್ದಾಂತಗಳಿಗೆ ಕಟ್ಟುಬೀಳಬೇಡಿ. ಅನುಭವಿಸಿ. ಪ್ರೀತಿ ಶಾಶ್ವತ ಅಥವಾ ಅಶಾಶ್ವತ ಎಂಬ ನಂಬಿಕೆಗಳಿಂದ ದೂರವಿರಿ. ಅನುಭವಿಸಿ ತಿಳಿಯಿರಿ. ಪರರಿಂದ ಸರಿ ತಪ್ಪುಗಳ ಅಭಿಪ್ರಾಯಗಳನ್ನ ಪಡೆಯದಿರಿ. ತಮ್ಮ ಅಭಿಪ್ರಾಯಗಳಿಂದ ಕೆಲ ಬೋಧಕರು ಇಡೀ ಜನಸಮುದಾಯಗಳನ್ನೇ ಹಾಳುಗೆಡುವಿದ್ದಾರೆ. ನೀವು ಹೇಗೆ ನಡೆಯಬೇಕು, ಮೊದಲು ಯಾವ ಕಾಲು ಮುಂದಿಡಬೇಕು ನಂತರ ಯಾವ ಕಾಲು ಮುಂದೆ ಬರಬೇಕು ಎಂಬ ಕಾನೂನುಗಳನ್ನ ಮಾಡಿದ್ದಾರೆ. ಅವರ ಆದೇಶ ಪಾಲಿಸದೆ ಇದ್ದಾಗ “ನೀವು ಪಾಪಿಗಳು, ನೀ ನರಕಕ್ಕೆ ಕುಸಿಯುವೆ” ಎಂದು ಅಬ್ಬರಿಸುತ್ತಾರೆ. ನರಕ ಬಲು ದೂರವಿದೆ. ಇಂತವರ ಆದೇಶ, ಸಿದ್ಧಾಂತಗಳನ್ನ ನಂಬಿದರೆ, ನೀವು ಈಗಲೇ ಇಲ್ಲೇ ಕುಸಿಯುವಿರಿ.
ಮೂಲ: ಓಶೋ
ಅನುವಾದ: Harish Gangadhar