ನವದೆಹಲಿ: ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಹೊಸ ಎತ್ತರಕ್ಕೆ ಏರಿದ್ದಾರೆ. ಅಥ್ಲೆಟಿಕ್ಸ್‌ನ ಎಲ್ಲ ಪ್ರಮುಖ ಅಂತರರಾಷ್ಟ್ರೀಯ ಕೂಟಗಳಲ್ಲಿ ಸ್ವರ್ಣ ಪದಕ ಜಯಿಸಿದ ಹೆಗ್ಗಳಿಕೆ ಅವರದ್ದು. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಜಯಿಸಿದ್ದ ಅವರು ಡೈಮಂಡ್ ಲೀಗ್‌ನಲ್ಲೂ ಚಾಂಪಿಯನ್ ಆಗಿದ್ದರು. ಅವರಿಗೆ ಏಕೈಕ ಕೊರತೆ ಎನಿಸಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಪಟ್ಟವೂ ಭಾನುವಾರ ರಾತ್ರಿ ಲಭಿಸಿತು. ಬುಡಾಪೆಸ್ಟ್‌ನಲ್ಲಿ ಕೊನೆಗೊಂಡ ಚಾಂಪಿಯನ್‌ಷಿಪ್‌ನ ಅಂತಿಮ ದಿನ ಅವರು 88.17 ಮೀ. ಸಾಧನೆಯೊಂದಿಗೆ ಜಾವೆಲಿನ್ ಥ್ರೋ ಸ್ಪರ್ಧೆಯ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. ಈ ಕೂಟದ ಇತಿಹಾಸದಲ್ಲಿ ಭಾರತಕ್ಕೆ ದೊರೆತ ಮೂರನೇ ಪದಕ ಇದಾಗಿದೆ. ಅದರಲ್ಲಿ ಎರಡು ನೀರಜ್ ತಂದಿತ್ತಿದ್ದಾರೆ. ಕಳೆದ ಕೂಟದಲ್ಲಿ ಅವರು ಬೆಳ್ಳಿ ಗೆದ್ದಿದ್ದರು. ಇನ್ನೊಂದು ಪದಕವನ್ನು (ಕಂಚು) 2003ರ ಕೂಟದಲ್ಲಿ ಲಾಂಗ್‌ಜಂಪ್ ಸ್ಪರ್ಧಿ ಅಂಜು ಬಾಬಿ ಜಾರ್ಜ್ ಗೆದ್ದುಕೊಟ್ಟಿದ್ದರು. ಭಾನುವಾರ ರಾತ್ರಿ ನೀರಜ್‌ಗೆ ಪ್ರಬಲ ಪೈಪೋಟಿ ನೀಡಿದ ಪಾಕಿಸ್ತಾನದ ಅರ್ಷದ್ ನದೀಮ್ (87.82 ಮೀ.) ಬೆಳ್ಳಿ ಗೆದ್ದರೆ, ಕಂಚಿನ ಪದಕ ಜೆಕ್ ರಿಪಬ್ಲಿಕ್‌ನ ಯಾಕುಬ್ ವಾದ್ಲೇಚ್ (86.67 ಮೀ.) ಅವರಿಗೆ ಒಲಿಯಿತು. ನೀರಜ್ ಅವರು ಚಿನ್ನದ ಪದಕದ ಜತೆ ₹ 58 ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಂಡರು.